ಹೈದರಾಬಾದ್:- ತೆಲಂಗಾಣದ ಮಾಜಿ ಸಿಎಂ ಕೆ.ಚಂದ್ರಶೇಖರ್ ರಾವ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ವ್ಯಕ್ತಿಯು ಶವವಾಗಿ ಪತ್ತೆಯಾಗಿರುವ ಘಟನೆ ಜಯಶಂಕರ್ ಭೂಪಲಪಲ್ಲಿಯಲ್ಲಿ ಜರುಗಿದೆ.
ಕೊಲೆಯಾದ ವ್ಯಕ್ತಿಯನ್ನು ಎನ್.ರಾಜಲಿಂಗಮೂರ್ತಿ ಎಂದು ಗುರುತಿಸಲಾಗಿದೆ. ಇವರು, ಕಾಲೇಶ್ವರಂ ಯೋಜನೆಯ ಭಾಗವಾಗಿ ಮೇಡಗಡ್ಡಿ ಬ್ಯಾರೇಜ್ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆಸಿದೆ ಎಂದು ಕೆಸಿಆರ್ ಹಾಗೂ ಇತರರ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಆದರೆ ಈ ಘಟನೆ ರಾಜಕೀಯ ದ್ವೇಷದಿಂದ ನಡೆದಿದ್ದಲ್ಲ ಎಂದು ಪೊಲೀಸರು ಹೇಳಿದ್ದಾರೆ. ಭೂ ವಿವಾದದ ಹಿನ್ನೆಲೆಯಲ್ಲಿ 50 ರ ವಯಸ್ಸಿನ ಎನ್. ರಾಜಲಿಂಗಮೂರ್ತಿ ಅವರನ್ನು ಇಬ್ಬರು ಅಪರಿಚಿತ ವ್ಯಕ್ತಿಗಳು ಇರಿದು ಕೊಂದಿದ್ದಾರೆ. ಬುಧವಾರ ಸಂಜೆ 7.30 ರ ಸುಮಾರಿಗೆ ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿದ್ದ ರಾಜಲಿಂಗಮೂರ್ತಿ ಅವರನ್ನು ಅಡ್ಡಗಟ್ಟಿದ ಇಬ್ಬರು ವ್ಯಕ್ತಿಗಳು ಇರಿದು ಕೊಂದಿದ್ದಾರೆ.
ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟರು. ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.