ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಹುಬ್ಬಳ್ಳಿಯ ನವೀಕೃತ ಬಸ್ ನಿಲ್ದಾಣವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ಬಸ್ ನಿಲ್ದಾಣವನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಶೌಚಾಲಯದ ಕುರಿತು ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಬಸ್ ನಿಲ್ದಾಣವನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ವಹಣೆ ಮಾಡದಿದ್ದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಶುಕ್ರವಾರ ಆಯೋಜಿಸಿದ್ದ ಹುಬ್ಬಳ್ಳಿಯ ನವೀಕೃತ ಕೇಂದ್ರ ಬಸ್ ನಿಲ್ದಾಣಗಳ ಉದ್ಘಾಟನೆ ಮತ್ತು ಅಪಘಾತ/ ಅಪರಾಧ ರಹಿತ ಸೇವೆ ಸಲ್ಲಿಸಿದ ಸಂಸ್ಥೆಯ ಚಾಲನಾ ಸಿಬ್ಬಂದಿಗಳಿಗೆ ಬೆಳ್ಳಿ ಪದಕ ವಿತರಣೆಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹುಬ್ಬಳ್ಳಿ-ಧಾರವಾಡದಲ್ಲಿ ಸುಮಾರು 100 ಎಕರೆ ಜಾಗವನ್ನು ಹೊಂದಿರುವ ಸಂಸ್ಥೆ ನಮ್ಮದು. 700 ಹೊಸ ಬಸ್‌ಗಳನ್ನು ನೀಡಲಾಗಿದೆ. ಅಲ್ಲದೇ 300 ಬಸ್‌ಗಳಿಗೆ ಟೆಂಡರ್ ಕರೆಯಲಾಗಿದೆ. ಸುಮಾರು 150 ಬಸ್‌ಗಳಿಗೆ ಅನುಮೋದನೆ ಕೊಡಲಾಗಿದೆ. ಡಿಸೆಂಬರ್‌ನಲ್ಲಿ ಅಧಿವೇಶನ ಮುಗಿದ ಬಳಿಕ ಮತ್ತಷ್ಟು ಬಸ್‌ಗಳನ್ನು ನೀಡಲಾಗುವುದು. 2019ರಲ್ಲಿ 13 ಸಾವಿರ ಹೊಸ ಸಿಬ್ಬಂದಿ ನೇಮಕಕ್ಕೆ ಅನುಮೋದನೆ ನೀಡಲಾಗಿತ್ತು. ಹಣಕಾಸು ಇಲಾಖೆ ಸುಮಾರು 9 ಸಾವಿರ ಸಿಬ್ಬಂದಿ ನೇಮಕಕ್ಕೆ ಅನುಮತಿ ನೀಡಿತು. ನಂತರದ ವರ್ಷಗಳಲ್ಲಿ ಯಾವುದೇ ನೇಮಕಾತಿ ನಡೆಯಲಿಲ್ಲ. ಸುಮಾರು 1 ಸಾವಿರ ಜನರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಪತ್ರ ವಿತರಿಸಲಾಗಿದೆ. ಇಂದು 37 ಜನರಿಗೆ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಭರಮಗೌಡ (ರಾಜು) ಅಲಗೌಡ ಕಾಗೆ ಮಾತನಾಡಿ, ಪ್ರತಿ ದಿನ ಸುಮಾರು 25 ಲಕ್ಷ ಮಹಿಳೆಯರು ಶಕ್ತಿ ಯೋಜನೆಯಡಿ ಪ್ರಯಾಣಿಸುತ್ತಿದ್ದಾರೆ. ಚಾಲಕರ ಹುದ್ದೆ ಅತ್ಯಂತ ಕಷ್ಟಕರವಾದದ್ದು. ಅತ್ಯುತ್ತಮ ರಸ್ತೆಗಳಿದ್ದರೆ ಗುಣಮಟ್ಟದ ಸೇವೆ ಒದಗಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಅಧ್ಯಕ್ಷ ಸೈಯದ್ ಅಜೀಮ್‌ಪೀರ ಎಸ್.ಖಾದ್ರಿ, ಮುಖ್ಯ ಅತಿಥಿಗಳಾಗಿ ಶಾಸಕರಾದ ಪ್ರದೀಪ ಶೆಟ್ಟರ, ಎಫ್.ಎಚ್. ಜಕ್ಕಪ್ಪನವರ, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ, ಮಹಾಪೌರ ಜ್ಯೋತಿ ಪಾಟೀಲ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸುನೀಲ್ ಹಣಮನ್ನವರ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಹೆಚ್‌ಡಿಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕಿ ಸಾವಿತ್ರಿ ಕಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಮತ್ತು ಇತರರು ಉಪಸ್ಥಿತರಿದ್ದರು.
ಸುನೀಲ್ ಪತ್ರಿ ಮತ್ತು ಸಂಗಡಿಗರು ನಾಡಗೀತೆ ಹಾಡಿದರು. ಮುಖ್ಯ ಯಾಂತ್ರಿಕ ಅಭಿಯಂತರ ಸಿದ್ಧೇಶ್ವರ ಹೆಬ್ಬಾಳ ಸ್ವಾಗತಿಸಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಎಂ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕುಲಕರ್ಣಿ ನಿರೂಪಿಸಿದರು. ಇಲಾಖಾ ಮುಖ್ಯಸ್ಥರಾದ ವಿವೇಕಾನಂದ ವಿಶ್ವಜ್ಞ ವಂದಿಸಿದರು.
ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್.ಲಾಡ್ ಮಾತನಾಡಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು 4 ವಿಭಾಗಗಳನ್ನು ಹೊಂದಿದೆ. ಪ್ರತಿ ದಿನ ಸುಮಾರು 1.50 ಕೋಟಿ ಜನರು ಸುರಕ್ಷಿತವಾಗಿ ಪ್ರಯಾಣಿಸುತ್ತಿದ್ದಾರೆ. ಸಾರಿಗೆ ವ್ಯವಸ್ಥೆಯಲ್ಲಿ ಕರ್ನಾಟಕ ರಾಜ್ಯ ಇಡೀ ದೇಶದಲ್ಲಿ ಮುಂಚೂಣಿಯಲ್ಲಿದೆ. ಸಾರಿಗೆ ಸಂಸ್ಥೆಗಳಿಗೆ ಒಟ್ಟಾರೆಯಾಗಿ 670 ಪ್ರಶಸ್ತಿಗಳು ದೊರೆತಿವೆ. ಅದರಲ್ಲಿ ಸುಮಾರು 400 ಪ್ರಶಸ್ತಿಗಳು ರಾಮಲಿಂಗಾರೆಡ್ಡಿ ಅವರ ಅಧಿಕಾರಾವಧಿಯಲ್ಲಿ ಸಂದಿವೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಹುಬ್ಬಳ್ಳಿಯ ಕೇಂದ್ರ ಬಸ್ ನಿಲ್ದಾಣವನ್ನು ಅತ್ಯುತ್ತಮವಾಗಿ ನಿರ್ಮಿಸಲಾಗಿದೆ. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ. ನೇಮಕಾತಿ ಪ್ರಕ್ರಿಯೆ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕಾಗಿದೆ. ಸಾರಿಗೆ ಸಿಬ್ಬಂದಿಗಳ ಸಮಸ್ಯೆಗೆ ಪರಿಹಾರ ಒದಗಿಸಬೇಕಾಗಿದೆ. ಪ್ರಯಾಣಿಕರು ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು. ಆಟೋ ನಿಲ್ದಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು.


