ವಿಜಯಸಾಕ್ಷಿ ಸುದ್ದಿ, ರೋಣ : ರೋಣ-ಹುಬ್ಬಳ್ಳಿ ಮುಖ್ಯ ರಸ್ತೆಯಲ್ಲಿರುವ ಜೋಡು ರಸ್ತೆಯ ವಿದ್ಯುತ್ ಕಂಬವೊಂದು ಬಾಗಿ ನಿಂತು ತಿಂಗಳುಗಳೇ ಗತಿಸಿದರೂ ಆಡಳಿತ ವ್ಯವಸ್ಥೆ ಮಾತ್ರ ಸರಿಪಡಿಸಲಾಗದ ಸ್ಥಿತಿ ತಲುಪಿರುವುದು ನಾಚಿಕೆ ತರುವ ಸಂಗತಿ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ನಿತ್ಯ ನೂರಾರು ವಾಹನಗಳು ಹಾಗೂ ಸಾವಿರಾರು ಜನರು ಸಂಚರಿಸುವ ಈ ರಸ್ತೆಯಲ್ಲಿ ವಿದ್ಯುತ್ ಕಂಬವೊಂದು ಬಾಗಿ ನಿಂತಿರುವುದು ಇದೇ ರಸ್ತೆಯಲ್ಲಿ ಸಂಚಾರ ಮಾಡುವ ಅಧಿಕಾರಿಗಳಿಗೆ ಕಾಣದಿರುವುದು ಆಡಳಿತದ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎನ್ನುವಂತಾಗಿದೆ.
ರೋಣ-ಹುಬ್ಬಳ್ಳಿ ರಸ್ತೆಗೆ ಹೊಂದಿಕೊಂಡಂತೆ ಜೋಡು ರಸ್ತೆಯನ್ನು ನಿರ್ಮಿಸಲಾಗಿದೆ. ಈ ರಸ್ತೆಯಲ್ಲಿ ರಾತ್ರಿ ಸಮಯದಲ್ಲಿ ಪಟ್ಟಣದ ಸೌಂದರ್ಯವನ್ನು ಹೆಚ್ಚಿಸಲು ವಿದ್ಯುತ್ ದೀಪದ ಕಂಬಗಳನ್ನು ಅಳವಡಿಕೆ ಮಾಡಲಾಗಿದ್ದು, ತಿಂಗಳ ಹಿಂದೆ ಅಪರಿಚಿತ ವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಬ ಬಾಗಿ ನಿಂತಿದೆ. ಇದರಿಂದ ಈ ರಸ್ತೆಯಲ್ಲಿ ರಾತ್ರಿ ಬೆಳಕು ಮರೀಚಿಕೆಯಾಗಿದ್ದು, ಸಾರ್ವಜನಿಕರು ಭಯದಲ್ಲಿ ಸಂಚಾರ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಮುಖ್ಯವಾಗಿ, ಕಂದಾಯ ಇಲಾಖೆ, ಪುರಸಭೆ, ತಾ.ಪಂ, ಸರಕಾರಿ ಆಸ್ಪತ್ರೆ, ಕೃಷಿ, ತೋಟಗಾರಿಕೆ, ಪಶು ಆಸ್ಪತ್ರೆ ಸೇರಿದಂತೆ ವಿವಿಧ ಇಲಾಖೆಗಳು ಸಹ ಇದೇ ರಸ್ತೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೆ ಪ್ರೌಢಶಾಲೆ, ಕಾಲೇಜುಗಳು ಸಹ ಇರುವುದು ಅಧಿಕಾರಿಗಳಿಗೆ ತಿಳಿದಿಲ್ಲವೇ ಅಥವಾ ಜಾಣ ಕುರುಡುತನವೇ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
ಇನ್ನಾದರೂ ಸದರಿ ಬಾಗಿದ ವಿದ್ಯುತ್ ಕಂಬವನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡುವರೇ ಎಂಬುದನ್ನು ಎದುರುನೋಡುವಂತಾಗಿದೆ.


