ವಿಜಯಸಾಕ್ಷಿ ಸುದ್ದಿ, ನರಗುಂದ : ತಾಲೂಕಿನ ವಾಸನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಕಡ್ಡಾಯ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ವಾಸನ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮಲ್ಲಪ್ಪ ವಾಲಿ ಮಾತನಾಡಿ, ಮೇ.7ರಂದು ಲೋಕಸಭಾ ಚುನಾವಣೆಯಲ್ಲಿ ಎಲ್ಲ ಕೂಲಿಕಾರರು ತಪ್ಪದೇ ಮತ ಚಲಾಯಿಸಬೇಕು. ಬೇಸಿಗೆ ಇದೆಯೆಂದು ಬೇರೆ ಊರಿಗೆ ಗುಳೆ ಹೋಗದೇ ಇದ್ದೂರಲ್ಲೇ ಉದ್ಯೋಗ ಖಾತ್ರಿ ಕೆಲಸ ಆರಂಭ ಮಾಡಲಾಗಿದೆ. ನಿಮ್ಮೂರಲ್ಲೇ ಉದ್ಯೋಗ ಖಾತರಿ ಕೆಲಸ ಮಾಡಿ ಮೇ. 7ರಂದು ಮತ ಚಲಾಯಿಸಿ. ಸಂವಿಧಾನ ನೀಡಿದ ಹಕ್ಕನ್ನು ಮರೆಯದೇ ಕಡ್ಡಾಯವಾಗಿ ಚಲಾಯಿಸೋಣ ಎಂದರು.
ವಾಸನ ಗ್ರಾ.ಪಂ ಕಾರ್ಯದರ್ಶಿ ಸಿದ್ದಯ್ಯ ಮಣ್ಣೂರಮಠ 395 ಜನ ಕೂಲಿಕಾರರಿಗೆ ಮತದಾನ ಕುರಿತಾದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಈ ಸಂದರ್ಭದಲ್ಲಿ ನರೇಗಾ ಸಿಬ್ಬಂದಿ ವರ್ಗ ಹಾಗೂ ವಾಸನ ಗ್ರಾ.ಪಂ ಸಿಬ್ಬಂದಿ ವರ್ಗದವರು ಹಾಜರಿದ್ದರು.