ಮೈಸೂರು/ಮಂಡ್ಯ:- ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ವಿವಿದ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಇಂದು ಮಂಡ್ಯ, ಮೈಸೂರು ಬಂದ್ ಗೆ ಕರೆ ಕೊಟ್ಟಿವೆ.
ಅದರಂತೆ ಮೈಸೂರಿನಲ್ಲಿ ಬೆಳಗ್ಗೆ ಪ್ರತಿಭಟನೆ ಆರಂಭವಾಗಿದೆ. ಬಸ್ ನಿಲ್ದಾಣದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ರಸ್ತೆಯಲ್ಲಿ ಕುಳಿತು ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿದರು.
ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗದ ಪ್ರಮುಖ ರಸ್ತೆಗಳಲ್ಲಿ ಅಮಿತ್ ಶಾ ಪ್ರತಿಕೃತಿಯ ಮೆರವಣಿಗೆ ನಡೆಸಿದರು. ಪೊಲೀಸರ ವಿರೋಧದ ನಡುವೆಯೂ ಪ್ರತಿಕೃತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಮಳಿಗೆಗಳಿಗೆ ತೆರಳಿ ಬಾಗಿಲು ಹಾಕಿಸಿದರು. ಆಟೊ ನಿಲ್ದಾಣಗಳಿಗೆ ತೆರಳಿ ಬಂದ್ ಬೆಂಬಲಿಸಲು ಮನವಿ ಮಾಡಿದರು.
ಇನ್ನೂ ಬಂದ್ ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ಮೈಸೂರು ಬಸ್ ನಿಲ್ದಾಣದ ಬಳಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಸಿಆರ್ ವ್ಯಾನ್, ಗಸ್ತು ವಾಹನ, ಕಮಾಂಡೋ ವಾಹನ ನಿಯೋಜನೆ ಮಾಡಲಾಗಿದೆ.
ಇನ್ನೂ ಮಂಡ್ಯದಲ್ಲಿ ಬೆಳಗ್ಗೆ ಎಂದಿನಂತೆಯೇ ಬಸ್ ಸಂಚಾರ ನಡೆಯುತ್ತಿದೆ. ಸಾರಿಗೆ ಬಸ್ಗಳು ಮಂಡ್ಯದಿಂದ ಬೇರೆಡೆಗೆ ತೆರಳುತ್ತಿವೆ. ವ್ಯಾಪಾರ ವಹಿವಾಟು ಕೂಡ ಎಂದಿನಂತೆಯೇ ಆರಂಭವಾಗುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಮಂಡ್ಯ ನಗರದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಇನ್ನೂ ಬಂದ್ ಬಿಸಿ ಆರಂಭವಾಗಿಲ್ಲ.
ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಬಂದ್ಗೆ ಕರೆ ನೀಡಲಾಗಿದೆ. ದಲಿತ, ರೈತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಮಹಾ ಒಕ್ಕೂಟದಿಂದ ಬಂದ್ಗೆ ಕರೆ ನೀಡಲಾಗಿದ್ದು, ಅಮಿತ್ ಶಾ ರಾಜೀನಾಮೆಗೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.