ಮಂಡ್ಯ: ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದ ಹೆಸರಿನಲ್ಲಿ ಓಟದ ಸ್ಪರ್ಧೆ ಏರ್ಪಡಿಸಿ ವ್ಯಕ್ತಿಯೊಬ್ಬ ಕೋಟ್ಯಾಂತರ ಜನರಿಗೆ ಮೋಸ ಮಾಡಿರುವ ಆರೋಪ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ಕೇಳಿಬಂದಿದೆ. ಹೌದು ರಾಷ್ಟ್ರ ಮಟ್ಟದ ಪುರುಷರ ಮತ್ತು ಮಹಿಳೆಯರ ಓಟದ ಸ್ಪರ್ಧೆ ಆಯೋಜನೆ ಮಾಡಿ ಅಪರಿಚಿತ ವ್ಯಕ್ತಿಯಿಂದ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು.
ಸೋಷಿಯಲ್ ಮೀಡಿಯಾದಲ್ಲಿ ವಿಜೇತರಿಗೆ ದೊಡ್ಡ ಮೊತ್ತದ ಬಹುಮಾನ ನೀಡುವುದಾಗಿ ಪೋಸ್ಟರ್ ವೈರಲಾಗಿತ್ತು. ಪೋಸ್ಟರ್‌ನಲ್ಲಿ ಪ್ರಥಮ ಬಹುಮಾನ 5 ಲಕ್ಷ ರೂ., ದ್ವಿತೀಯ 4 ಲಕ್ಷ ರೂ., ತೃತೀಯ 3 ರೂ., ನಾಲ್ಕನೇ ಬಹುಮಾನ 2 ಲಕ್ಷ ರೂ. ಹಾಗೂ ಐದನೇ ಬಹುಮಾನ 1 ಲಕ್ಷ ರೂ. ಎಂದು ನಮೂದಿಸಲಾಗಿತ್ತು.
ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ 10 ಸಾವಿರ ರೂ. ಪ್ರವೇಶ ಶುಲ್ಕ, ಮುಂಗಡ 3500 ರೂ. ನೀಡಿ ನೋಂದಾಯಿಸಿಕೊಳ್ಳಲು ಸೂಚಿಸಲಾಗಿತ್ತು. ನ.20 ರಂದು ಬೆಳಗ್ಗೆ 8 ಗಂಟೆಗೆ ಮಳವಳ್ಳಿಯಲ್ಲಿ ಸ್ಪರ್ಧೆ ನಡೆಯುವುದಾಗಿ ಉಲ್ಲೇಖಿಸಲಾಗಿತ್ತು. ಪೋಸ್ಟರ್‌ನಲ್ಲಿ ನಂಬರ್ ಹಾಕಿ ವಂಚಿಸಿದ್ದು, ಈಗಾಗಲೇ ಹಲವರಿಂದ ಹಣ ವಸೂಲಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಪ್ಪು ಹೆಸರಲ್ಲಿ ಕೋಟ್ಯಂತರ ಜನರಿಗೆ ಅಪರಿಚಿತ ವ್ಯಕ್ತಿ ಮೋಸ ಮಾಡುತ್ತಿದ್ದಾನೆ.
ಡಾ.ರಾಜ್ ಕುಟುಂಬಕ್ಕೆ ಹಾಗೂ ಮಳವಳ್ಳಿಗೂ ಅವಿನಾಭಾವ ಸಂಬಂಧವಿದ್ದು, ಸ್ಪರ್ಧಾಳುಗಳಿಗೆ ಹಣದ ಆಮಿಷವೊಡ್ಡಿ ವಂಚನೆ ಮಾಡುತ್ತಿದ್ದಾನೆ. ಮುಂಗಡ ಹಣ ನೀಡಿ ಯಾರೂ ಮೋಸ ಹೋಗಬಾರದು ಎಂದು ಜನರಿಗೆ ಎಚ್ಚರಿಕೆ ನೀಡಿದ್ದು, ಅಪರಿಚಿತ ವ್ಯಕ್ತಿ ವಿರುದ್ಧ ರಾಶಿರಾಪು ಸೇನಾ ಸಮಿತಿಯಿಂದ ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.