ಮಂಡ್ಯ: ಬಲಮುರಿಯ ಕಾವೇರಿ ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಬಲಮುರಿಯಲ್ಲಿ ನಡೆದಿದೆ. ದಾವಣಗೆರೆ ಮೂಲದ ವಿದ್ಯಾರ್ಥ ಜಾವಿದ್ (22) ಮೃತ ದುರ್ದೈವಿ ಯುವಕನಾಗಿದ್ದು,
ನಿನ್ನೆ ಸಂಜೆ ಸ್ನೇಹಿತರೊಂದಿಗೆ ಬಲಮುರಿಗೆ ಪ್ರವಾಸಕ್ಕೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಈಜಲು ನದಿಗೆ ಇಳಿದಿದ್ದ ಜಾವಿದ್ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದರೆಂದು ತಿಳಿದುಬಂದಿದೆ.
ಸ್ನೇಹಿತರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದರೂ ನಿನ್ನೆ ರಾತ್ರಿ ಮೃತದೇಹ ಪತ್ತೆಯಾಗಿರಲಿಲ್ಲ. ಇಂದು ಬೆಳಿಗ್ಗೆ ಹುಡುಕಾಟ ಮುಂದುವರಿಸಿದ ವೇಳೆ ಜಾವಿದ್ ಅವರ ಮೃತದೇಹ ಪತ್ತೆಯಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೈಸೂರು ಕೆ.ಆರ್. ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪ್ರಕರಣವು ಕೆ.ಆರ್.ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.



