ಬಳ್ಳಾರಿ: ನಗರದ ಕೆಎಂಎಫ್ ಡೈರಿ ಕ್ರಾಸ್ ಸಮೀಪದ ಬಾಡಿಗೆ ಮನೆಯಲ್ಲಿ ಮಂಗಳಮುಖಿ ಸುಹಾಸಿನಿ (29) ಮತ್ತು ಯುವಕ ಶೇಖರ್ ಅಲಿಯಾಸ್ ಮಣಿ (31) ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಅನೇಕ ಪ್ರಶ್ನೆಗಳನ್ನು ಎಬ್ಬಿಸಿದೆ. ಮನೆಯ ಕಿಟಕಿಗೆ ನೇಣುಬಿಗಿದ ಸ್ಥಿತಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ.
ಶೇಖರ್ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮಲ್ಪನಗುಡಿ ಗ್ರಾಮದವರಾಗಿದ್ದು, ಆಟೋ ಚಾಲಕರಾಗಿ ಜೀವನ ನಡೆಸುತ್ತಿದ್ದರು. ಸುಹಾಸಿನಿ ಬಳ್ಳಾರಿ ತಾಲೂಕಿನ ಚಾಗನೂರು ಗ್ರಾಮದವರಾಗಿದ್ದರು. ಕಳೆದ ಆರು ವರ್ಷಗಳಿಂದ ಇಬ್ಬರೂ ಒಟ್ಟಿಗೆ ವಾಸವಾಗಿದ್ದರು ಎನ್ನಲಾಗಿದೆ.
ಘಟನೆಯ ಮಾಹಿತಿ ಸಿಕ್ಕ ತಕ್ಷಣ ಬ್ರೂಸ್ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಬಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾವಿನ ಹಿನ್ನಲೆಯಲ್ಲಿ ಹಲವು ಕೋನಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಮಂಗಳಮುಖಿ ಸಮುದಾಯದ ಸದಸ್ಯರು ಶೇಖರ್ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಉದ್ಭವಿಸಿದ ತಕರಾರಿನಿಂದ ಸುಹಾಸಿನಿ ಕೊಲೆಯಾಗಿರಬಹುದು, ನಂತರ ಶೇಖರ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಕುಟುಂಬಸ್ಥರ ದುಃಖ ಮತ್ತು ಆಕ್ರಂದನ ಮನಕಲಕುವಂತಿದೆ. ಆತ್ಮಹತ್ಯೆಯೋ ಅಥವಾ ಪೂರ್ವಯೋಜಿತ ಕೊಲೆಯೋ ಎಂಬುದನ್ನು ಮರಣೋತ್ತರ ವರದಿ ಮತ್ತು ತನಿಖೆಯ ನಂತರವೇ ಸ್ಪಷ್ಟಪಡಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.



