ಮಂಗಳೂರು: ವಿದೇಶದಲ್ಲಿರುವ ಸೈಬರ್ ಅಪರಾಧಿಗಳೊಂದಿಗೆ ಕೈಜೋಡಿಸಿ ಆನ್‌ಲೈನ್ ವಂಚನೆ ನಡೆಸುತ್ತಿದ್ದ ಆರು ಮಂದಿಯನ್ನು ಹೈದರಾಬಾದ್ನಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಶೇಖ್ ಕರೀಮುಲ್ಲಾ, ಬುಡಿದಿನ್ನೆ ವಂಶಿ, ಬಡೆ ಶ್ರೀನಿವಾಸ್, ಪಂಡಿತಿ ಕ್ರಾಂತಿ ಕುಮಾರ್, ಇಬ್ರಾಹಿಂ ಪ್ರಾಯ ಹಾಗೂ ಉತ್ಸಲ ಸಂತೋಷ್ ಕೃಷ್ಣ ಎಂದು ಗುರುತಿಸಲಾಗಿದೆ. ಆರೋಪಿಗಳು ಒಂದೇ ದಿನದಲ್ಲಿ ಸುಮಾರು 2 ಕೋಟಿ ರೂಪಾಯಿ ವಹಿವಾಟು ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿಗಳು ಬ್ಯಾಂಕ್ ಖಾತೆದಾರರಿಗೆ 4ರಿಂದ ಶೇಕಡಾ 6 ರಷ್ಟು ಕಮಿಷನ್ ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜಾಹಿರಾತು ನೀಡಿ ಜನರನ್ನು ಸೆಳೆಯುತ್ತಿದ್ದರು. ಈ ಜಾಹಿರಾತನ್ನು ನಂಬಿದವರಿಂದ ಒಟಿಪಿ ಪಡೆದು, ಅದನ್ನು ವಿದೇಶದಲ್ಲಿರುವ ಸೈಬರ್ ಅಪರಾಧಿಗಳಿಗೆ ರವಾನಿಸುತ್ತಿದ್ದರು. ನಂತರ ವಿದೇಶದಲ್ಲಿದ್ದ ಖದೀಮರು ಹಣವನ್ನು ಎಗರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರಿನ ಮೊಹಮ್ಮದ್ ಇಕ್ಬಾಲ್ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 18 ಮೊಬೈಲ್ ಫೋನ್‌ಗಳು, 12 ಸಿಮ್ ಕಾರ್ಡ್‌ಗಳು, ಒಂದು ಲ್ಯಾಪ್‌ಟಾಪ್, 15 ಚೆಕ್ ಬುಕ್‌ಗಳು, 18 ಡೆಬಿಟ್ ಕಾರ್ಡ್‌ಗಳು ಹಾಗೂ 12 ಬ್ಯಾಂಕ್ ಪಾಸ್‌ಬುಕ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.



