ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ನೀರಲಗಿ ಗ್ರಾಮ ಪಂಚಾಯಿತಿಗೆ ನೂತನ ಉಪಾಧ್ಯಕ್ಷರಾಗಿ ನಾಗಸಮುದ್ರ ಗ್ರಾಮದ ಗ್ರಾ.ಪಂ ಸದಸ್ಯ, ಸಾಮಾಜಿಕ ಹೋರಾಟಗಾರರಾದ ಮಂಜುನಾಥ ಪಿ.ಪರ್ವತಗೌಡ್ರ ಆಯ್ಕೆಯಾಗಿದ್ದಾರೆ.
ನಾಗಸಮುದ್ರ, ಬೆನಕೊಪ್ಪ ಗ್ರಾಮದ ಗ್ರಾ.ಪಂ ಒಳಗೊಂಡು ನೀರಲಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 11 ಸದಸ್ಯರ ಸಂಖ್ಯಾಬಲವಿತ್ತು. ಅಧಿಕೃತವಾಗಿ ನಡೆದ ಚುನಾವಣೆಯಲ್ಲಿ 11 ಮತಗಳ ಪೈಕಿ 8 ಮತಗಳನ್ನು ಪಡೆಯುವ ಮೂಲಕ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಮಂಜುನಾಥ ಪಿ.ಪರ್ವತಗೌಡ್ರ ಜಯ ಸಾಧಿಸಿದರು. ಈ ವೇಳೆ ಗ್ರಾ.ಪಂ. ಸದಸ್ಯರು ಹಾಗೂ ಹಿರಿಯರು ನೂತನ ಉಪಾಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮಾತನಾಡಿದ ಮಂಜುನಾಥ ಪಿ.ಪರ್ವತಗೌಡ್ರ, ಹಲವು ದಶಕಗಳಿಂದ ಜನಪರ ಹೋರಾಟದ ಮೂಲಕ ನನ್ನ ರಾಜಕೀಯ ಜೀವನವನ್ನು ಆರಂಭಿಸಿದೆ. ನಾಗಸಮುದ್ರ ಗ್ರಾಮದ ಜನರು ನನ್ನ ಮೇಲೆ ವಿಶ್ವಾಸವಿಟ್ಟು ಪ್ರಥಮ ಬಾರಿಗೆ ಆಯ್ಕೆ ಮಾಡಿದರು. ನಾಗಸಮುದ್ರ ಗ್ರಾಮದ ಹಿರಿಯರ ಹಾಗೂ ನನಗೆ ಮತ ನೀಡಿದ ಮತದಾರರ ಆಶೀರ್ವಾದದಿಂದ ಉಪಾಧ್ಯಕ್ಷನಾಗಿದ್ದೇನೆ. ಈ ಅವಕಾಶ ನನಗೆ ಸೇವೆ ಮಾಡಲು ಮತ್ತಷ್ಟು ಪ್ರೇರಣೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರನ್ನೊಳಗೊಂಡು ಸರ್ವ ಸದಸ್ಯರು, ನೀರಲಗಿ, ನಾಗಸಮುದ್ರ, ಬೆನಕೊಪ್ಪ ಗ್ರಾಮದ ಎಲ್ಲಾ ಗುರು-ಹಿರಿಯರು, ಎಲ್ಲಾ ಪಕ್ಷದ ಮುಖಂಡರು ಉಪಸ್ಥಿತರಿದ್ದರು.