ಹಾವೇರಿ: ನೇಣುಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿರುವ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ನಾಯಕನೂರು ಗ್ರಾಮದಲ್ಲಿ ನಡೆದಿದೆ. ಮಲ್ಲಿಕಾರ್ಜುನಪ್ಪ ಹಳೆಮನಿ (48) ಅನುಮಾನ್ಪದ ರೀತಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆಗೈದಿರೋ ಆರೋಪ ಕುಟುಂಬಸ್ಥರಿಂದ ಕೇಳಿಬಂದಿದೆ.
ಮಲ್ಲಿಕಾರ್ಜುನಪ್ಪ ಮತ್ತು ಪಕ್ಕಿರೇಶ್ ಕಾಗಿ ಎಂಬವರ ನಡುವೆ ಜಮೀನು ಸಂಬಂಧಿತ ವಿವಾದವಿತ್ತು. ಮೃತ ವ್ಯಕ್ತಿ ಸುಮಾರು 2 ಲಕ್ಷ ರೂಪಾಯಿ ಹಣ ನೀಡಿ ಪಕ್ಕಿರೇಶ್ನಿಂದ ಜಮೀನು ಉಳುಮೆ ಮಾಡಿಕೊಂಡಿದ್ದರು. ಈ ಜಮೀನನ್ನು ಫಕ್ಕಿರೇಶ್ ಹಾಗೂ ಅವರ ಪತ್ನಿ ನೇತ್ರಾ ಕಾಗಿ ಗಿರವಿಯಾಗಿ ಇಟ್ಟಿದ್ದರು.
ಆದರೆ ಫಕ್ಕಿರೇಶ ಪತ್ನಿ ನೇತ್ರಾ 1 ಲಕ್ಷ ರೂ ಕೊಟ್ಟು ಜಮೀನು ವಾಪಸ್ ಬಿಡುವಂತೆ ಕಿರಿಕ್ ಮಾಡಿದ್ದಳು. ಈ ಸಂಬಂಧ ಮಲ್ಲಿಕಾರ್ಜುನಪ್ಪ ಮಾತ್ರ ಪೂರ್ಣ 2 ಲಕ್ಷ ರೂಪಾಯಿ ನೀಡಿದರೆ ಮಾತ್ರ ಜಮೀನು ಬಿಡುತ್ತೇನೆ ಎಂದು ಹೇಳಿದ್ದರು.
ಇಬ್ಬರೂ ಸಹ ಇದೇ ವಿಚಾರಕ್ಕೆ ಒಂದು ಸಲ ಸವಣೂರು ಠಾಣೆ ಮೆಟ್ಟಿಲು ಏರಿದ್ದರು. ಆದರೆ ಠಾಣೆ ಬೇಡ ರಾಜಿ ಸಂಧಾನ ಮೂಲಕ ಬಗೆಹರಿಸಿಕೊಳ್ಳೊಣ ಎಂದಿದ್ದ ನೇತ್ರಾ ಜಮೀನು ವಿಚಾರದ ಮಾತುಕತೆಗೆ ಮಂಗಳವಾರ ರಾತ್ರಿ ಬನ್ನಿ ಅಂತೇಳಿ ಮನೆಯಿಂದ ಕರೆದುಕೊಂಡು ಹೋಗಿದ್ದಳು.
ಆದ್ರೆ ನೇತ್ರಾ ಮಾತು ನಂಬಿ ಜಮೀನು ವಿಚಾರದ ಮಾತುಕತೆಗೆ ತೆರಳಿದ್ದ ಮಲ್ಲಿಕಾರ್ಜುನಪ್ಪ ಶವವಾಗಿ ಪತ್ತೆಯಾಗಿದ್ದಾರೆ. ಸದ್ಯ ಮೃತನ ಕುಟುಂಬಸ್ಥರು ಸವಣೂರು ಪೊಲೀಸ್ ಠಾಣೆಯಲ್ಲಿ ಪಕ್ಕಿರೇಶ್ ಕಾಗಿ, ನೇತ್ರಾ ಕಾಗಿ, ನಿಂಗಪ್ಪ ಕಾಗಿ ಹಾಗೂ ಮಾಲಿಂಗಪ್ಪ ಕಾಗಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಈ ಪೈಕಿ ಪಕ್ಕಿರೇಶ್ ಹಾಗೂ ನೇತ್ರಾ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.