ಗದಗ:- ವ್ಯಕ್ತಿಯ ಕೊಲೆ ಮಾಡಿ ಬಳಿಕ ಕೈ ಕಾಲುಕಟ್ಟಿ ಶವವನ್ನು ದುಷ್ಕರ್ಮಿಗಳು ಬಾವಿಗೆ ಎಸೆದಿರುವ ಆಘಾತಕಾರಿ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಮುಗಳಿ ಗ್ರಾಮದ ಜಮೀನಿನಲ್ಲಿ ಜರುಗಿದೆ. ರೋಣ ಪಟ್ಟಣದ ಹರಣಶಿಕಾರಿ ಓಣಿಯ ನಿವಾಸಿ 30 ವರ್ಷದ ಶಂಕ್ರಪ್ಪ ಕೊಳ್ಳಿ ಕೊಲೆಯಾದ ವ್ಯಕ್ತಿ.
ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮುಖಕ್ಕೆ ಚಾದರ ಕಟ್ಟಿ, ಎದೆ ಹಾಗೂ ಕುತ್ತಿಗೆ ಭಾಗಕ್ಕೆ ವೇಲ್ ಕಟ್ಟಿ ದುಷ್ಕರ್ಮಿಗಳು ಶವ ಎಸೆದು ಎಸ್ಕೇಪ್ ಆಗಿದ್ದಾರೆ. ಐದು ದಿನಗಳ ಹಿಂದೆ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಮೃತ ವ್ಯಕ್ತಿಯ ಪತ್ನಿ ನೀಡಿದ್ದ ದೂರಿನ ಅನ್ವಯ ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಕೈಗೊಂಡಾಗ ವ್ಯಕ್ತಿಯ ಕೊಲೆ ಆಗಿರುವುದು ಬೆಳಕಿಗೆ ಬಂದಿದೆ. ನಿನ್ನೆ ಸಂಜೆ ರೋಣ ಪಿಎಸ್ಐ ಪ್ರಕಾಶ್ ಬಣಕಾರ, ಕುಟುಂಬಸ್ಥರ ಸಮ್ಮುಖದಲ್ಲಿ ಕ್ರೇನ್ ಮೂಲಕ ಬಾವಿಯಲ್ಲಿನ ಶವವನ್ನು ಹೊರತೆಗೆಯಲಾಗಿದೆ.
ಕೊಲೆಯ ಭೀಕರತೆ ಕಂಡು ಮುಗಳಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದು, ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.