ಚೆನ್ನೈ ಮೇಲೆ ‘ವಿರಾಟ’ನ ಆರ್ಭಟ: ಕೊಹ್ಲಿ ಅಬ್ಬರಕ್ಕೆ ಹಲವು ದಾಖಲೆ ಉಡೀಸ್!

0
Spread the love

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಆರ್ ಸಿಬಿ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಎರಡು ರನ್ ಗಳಿಂದ ಗೆದ್ದು ಬೀಗಿದೆ.

Advertisement

ಪಂದ್ಯದಲ್ಲಿ RCB ಪರ ಆರಂಭಿಕವಾಗಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ್ದು, ಹಲವು ದಾಖಲೆ ಉಡೀಸ್ ಆಗಿದೆ. ಆರ್​ಸಿಬಿ ಪರ ವಿರಾಟ್ ಕೊಹ್ಲಿ 33 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 66 ರನ್ ಬಾರಿಸಿದ್ದರು. ಈ ಭರ್ಜರಿ ಬ್ಯಾಟಿಂಗ್​ನೊಂದಿಗೆ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸಿಕ್ಸರ್ ಕಿಂಗ್: ಈ ಪಂದ್ಯದಲ್ಲಿ ಬಾರಿಸಿದ 5 ಸಿಕ್ಸ್​ಗಳೊಂದಿಗೆ ವಿರಾಟ್ ಕೊಹ್ಲಿ ಆರ್​ಸಿಬಿ ಪರ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಆರ್​ಸಿಬಿ ಪರ 300+ ಸಿಕ್ಸ್ ಬಾರಿಸಿದ ಏಕೈಕ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಿಂಗ್ ಕೊಹ್ಲಿ ಆರ್​ಸಿಬಿ ಪರ ಈವರೆಗೆ 304 ಸಿಕ್ಸ್​ಗಳನ್ನು ಬಾರಿಸಿದ್ದಾರೆ.

ಸಿಕ್ಸರ್ ಸರದಾರ: ಟಿ20 ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಮೈದಾನದಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೂ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 151 ಸಿಕ್ಸ್ ಬಾರಿಸಿ ಗೇಲ್ ಈ ದಾಖಲೆ ಬರೆದಿದ್ದರು. ಇದೀಗ ಬೆಂಗಳೂರಿನಲ್ಲಿ 154 ಸಿಕ್ಸ್ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಈ ದಾಖಲೆ ಮುರಿದಿದ್ದಾರೆ.

500+ ರನ್ಸ್: ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ 500+ ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ಕೂಡ ವಿರಾಟ್ ಕೊಹ್ಲಿ ಪಾಲಾಗಿದೆ.

ಅರ್ಧಶತಕದ ವೀರ: ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಅರ್ಧಶತಕ ಬಾರಿಸಿದ ಡೇವಿಡ್ ವಾರ್ನರ್ (62) ಅವರ ದಾಖಲೆಯನ್ನು ಸಹ ವಿರಾಟ್ ಕೊಹ್ಲಿ ಸರಿಗಟ್ಟಿದ್ದಾರೆ. ಸಿಎಸ್​ಕೆ ವಿರುದ್ಧದ ಅರ್ಧಶತಕದೊಂದಿಗೆ ಕೊಹ್ಲಿಯ ಐಪಿಎಲ್ ಹಾಫ್​ ಸೆಂಚುರಿಗಳ ಸಂಖ್ಯೆ 62 ಕ್ಕೇರಿದೆ.

ರನ್ ಸರದಾರ: ಐಪಿಎಲ್ ಇತಿಹಾಸದಲ್ಲಿ ಒಂದು ತಂಡದ ಪರ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಕೂಡ ವಿರಾಟ್ ಕೊಹ್ಲಿ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಡೇವಿಡ್ ವಾರ್ನರ್ ಹೆಸರಿನಲ್ಲಿತ್ತು. ವಾರ್ನರ್ ಪಂಜಾಬ್ ಕಿಂಗ್ಸ್ ವಿರುದ್ಧ 1134 ರನ್ ಬಾರಿಸಿ ಈ ದಾಖಲೆ ಬರೆದಿದ್ದರು. ಇದೀಗ ಸಿಎಸ್​ಕೆ ವಿರುದ್ಧ 1146 ರನ್ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.


Spread the love

LEAVE A REPLY

Please enter your comment!
Please enter your name here