ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ನಾಗರಿಕರಿಗೆ ಆನ್‌ಲೈನ್ ಸೇವೆಗಳು ಒಂದೇ ಸೂರಿನಲ್ಲಿ ದೊರೆಯಬೇಕೆನ್ನುವ ಉದ್ದೇಶದಿಂದ ರಾಜ್ಯ ಸರಕಾರವು ಕರ್ನಾಟಕ ಒನ್ ಸೇವಾ ಕೇಂದ್ರವನ್ನು ಸ್ಥಾಪಿಸಿದೆ. ಈ ಕೇಂದ್ರವು ನಾಗರಿಕರಿಗೆ ವಿವಿಧ ಸರ್ಕಾರಿ ಮತ್ತು ಖಾಸಗಿ ಸೇವೆಗಳನ್ನು ಒಂದೇ ಸ್ಥಳದಲ್ಲಿ ಒದಗಿಸುತ್ತದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಯುವ ಮುಖಂಡ ಆನಂದ ಗಡ್ಡದೇವರಮಠ ಅಭಿಪ್ರಾಯಪಟ್ಟರು.
ಅವರು ರವಿವಾರ ಪಟ್ಟಣದ ಬಳಿಗಾರ(ಕಾಶೆಟ್ಟಿ) ಓಣಿಯಲ್ಲಿ ನೂತನ ಕರ್ನಾಟಕ ಒನ್ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಒನ್ ಕರ್ನಾಟಕ ಸರ್ಕಾರದ ಆನ್‌ಲೈನ್ ಪೋರ್ಟಲ್ ಆಗಿದ್ದು, ಇದರಲ್ಲಿ ಸರಕಾರದ ಅನೇಕ ಮಹತ್ವದ ಯೋಜನೆಗಳು, ಆಧಾರ್ ತಿದ್ದುಪಡಿ ಇತ್ಯಾದಿ ಸುಮಾರು 48 ಸೇವೆಗಳು ಇದರಲ್ಲಿ ದೊರೆಯುವಂತೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಆಸ್ತಿ ತೆರಿಗೆಗಳನ್ನು ಸಹ ಇದೇ ಕರ್ನಾಟಕ ಒನ್ ಕೇಂದ್ರದಲ್ಲಿ ಪಾವತಿಸಬಹುದಾಗಿದ್ದು, ಹಂತಹಂತವಾಗಿ ಈ ಕೇಂದ್ರದಿಂದ ಸಾರ್ವಜನಿಕರಿಗೆ ಹೆಚ್ಚಿನ ಸೇವೆ ದೊರೆಯುವಂತಾಗಲಿ ಎಂದು ಹೇಳಿದರು.
ಕೇಂದ್ರದ ಮುಖ್ಯಸ್ಥ ಶಬ್ಬೀರ್‌ಅಲಿ ಶೇಖ್ ಮಾತನಾಡಿ, ಕರ್ನಾಟಕ ಸರ್ಕಾರವು ಒದಗಿಸುವ ವಿವಿಧ ಸೇವೆಗಳನ್ನು ಪಡೆಯಲು ಜನರು ಕರ್ನಾಟಕ ಒನ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಆಸ್ತಿ ತೆರಿಗೆ, ನೀರಿನ ಬಿಲ್‌ಗಳನ್ನೂ ಇಲ್ಲಿ ಪಾವತಿಸಬಹುದು. ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಸೇವೆಗಳನ್ನು ಇಲ್ಲಿ ಪಡೆಯಬಹುದು. ಕರ್ನಾಟಕ ಒನ್ ಕೇಂದ್ರ ಪಟ್ಟಣದ ನಾಗರಿಕರಿಗೆ ವಿವಿಧ 15 ಇಲಾಖೆಗಳ 48 ಸೇವೆಗಳನ್ನು ಒದಗಿಸಲಿದ್ದು, ಹಂತ ಹಂತವಾಗಿ ಸೇವಾ ಕ್ಷೇತ್ರವನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಪೀರದೋಷ್ ಅಡೂರ, ಸದಸ್ಯರಾದ ಎಸ್.ಕೆ. ಹವಾಲ್ದಾರ, ಮುಸ್ತಾಕ್‌ಅಹ್ಮದ್ ಶಿರಹಟ್ಟಿ, ಸಿಕಂದರ್ ಕಣಕೆ, ಅಂಜುಮನ್ ಸಂಸ್ಥೆ ಅಧ್ಯಕ್ಷ ಎಮ್.ಎಮ್. ಗದಗ, ಇಬ್ರಾಹಿಂ ಮುಲ್ಲಾ, ಗಂಗಾಧರ ಮ್ಯಾಗೇರಿ, ನಾರಾಯಣಸಾ ಪವಾರ, ಕಿರಣ ನವಲೆ, ನಿರಂಜನ ವಾಲಿ, ಚಂದ್ರಶೇಖರ ಸುಂಕದ, ನೀಲಪ್ಪ ಪಡಗೇರಿ, ವಾಸಿ ಬೋಮಲೆ ಮುಂತಾದವರಿದ್ದರು.


