ವಿಜಯಸಾಕ್ಷಿ ಸುದ್ದಿ, ರೋಣ: ಮಾರನಬಸರಿ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಸೇರಿಕೊಂಡು ಭಕ್ತಿಯಿಂದ ಮೊಹರಂ ಹಬ್ಬವನ್ನು ಆಚರಿಸುವ ಮೂಲಕ ಭಾವೈಕ್ಯತೆಗೆ ಮಾದರಿಯಾಗಿದ್ದಾರೆ ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷ, ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.
ಅವರು ರವಿವಾರ ಮೊಹರಂ ಹಬ್ಬದ ನಿಮಿತ್ತ ಮಾರನಬಸರಿ ಗ್ರಾಮಕ್ಕೆ ಆಗಮಿಸಿ ಅಲೈ ದೇವರುಗಳ ದರ್ಶನ ಪಡೆದು ಭಕ್ತರನ್ನುದ್ದೇಶಿಸಿ ಮಾತನಾಡಿದರು.
ಗ್ರಾಮದ ಸರ್ವ ಜನಾಂಗದವರು ಎಲ್ಲ ಹಬ್ಬ ಮತ್ತು ಜಾತ್ರೆಗಳನ್ನು ಆಚರಿಸುವ ಮೂಲಕ ಏಕತೆ ಹಾಗೂ ಸಹೋದರತೆಯನ್ನು ಮೆರೆಯುತ್ತಿರುವುದು ಮೆಚ್ಚುವ ಸಂಗತಿಯಾಗಿದೆ. ಮಾರನಬಸರಿ ಗ್ರಾಮ ಬರಿ ಗದಗ ಜಿಲ್ಲೆಗಲ್ಲ, ನಾಡಿಗೇ ಮಾದರಿಯಾಗಿದೆ ಎಂದರು.
ನಾನು ಸಹ ಪ್ರತಿ ವರ್ಷ ಭಕ್ತಿಯಿಂದ ಹಬ್ಬದಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆದಿರುವುದು ನನ್ನ ಸೌಭಾಗ್ಯವಾಗಿದೆ ಎಂದರು. ಇದೇ ಸಂಧರ್ಭದಲ್ಲಿ ಎರಡೂ ಮಸೂತಿಗಳ ಹಿರಿಯರು ಶಾಸಕ ಜಿ.ಎಸ್. ಪಾಟೀಲರನ್ನು ಸನ್ಮಾನಿಸಿದರು.
ಕತ್ತಲ್ ರಾತ್ರಿಯಂದು 20 ಸಾವಿರಕ್ಕೂ ಹೆಚ್ಚಿನ ಭಕ್ತರು ಆಗಮಿಸಿ ಅಲೈ ದೇವರುಗಳಿಗೆ ಸಕ್ಕರೆ ನೈವೇದ್ಯವನ್ನು ಅರ್ಪಿಸಿ ಧನ್ಯತೆ ಮೆರೆದರು. ಬಸವರಾಜ ನವಲಗುಂದ, ಯೂಸುಫ್ ಇಟಗಿ, ಶರಣಪ್ಪ ಕುರಿ, ಶೇಖರಗೌಡ ಪಾಟೀಲ, ಅಂದಪ್ಪ ಮರಡಿ, ಎಸ್.ಎಚ್. ಹಾದಿಮನಿ, ಮರ್ತುಜಸಾಬ ಮೋತೆಖಾನ್, ಅಡಿವೆಪ್ಪ ಜಿಗಳೂರ, ಈರಪ್ಪ ನಿಡಗುಂದಿ, ಅಂದಾನಯ್ಯ ಶಾಂತಗೀರಮಠ ಸೇರಿದಂತೆ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಎರಡೂ ಮಸೂತಿಗಳ ಹಿರಿಯರು ಉಪಸ್ಥಿತರಿದ್ದರು.