ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮದುವೆಯು ಮನುಷ್ಯನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಜೀವಿತಾವಧಿಯಲ್ಲಿ ಮನುಷ್ಯನಿಗೆ ಸಿಗುವ ಅನೇಕ ಸಂಸ್ಕಾರಗಳಲ್ಲಿ ಮದುವೆಯೂ ಒಂದು ಮತ್ತು ಇದು ಜೀವನದ ಅತ್ಯಂತ ಮಹತ್ವದ ಘಟ್ಟವಾಗಿದೆ ಎಂದು ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ಕೋಡಿಕೊಪ್ಪದ ಶ್ರೀ ವೀರಪ್ಪಜ್ಜನವರ ಜಾತ್ರಾಮಹೋತ್ಸವದ ಮುನ್ನಾ ದಿನ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮದುವೆಯಾಗುವುದು ಮುಖ್ಯವಲ್ಲ. ಆದರೆ ನಂತರ ಇಬ್ಬರೂ ಹೊಂದಿಕೊಂಡು ಬಾಳುವೆಯನ್ನು ಸಾಗಿಸುವುದು ಮುಖ್ಯ. ಇಬ್ಬರ ನಡುವಿನ ಹೊಂದಾಣಿಕೆ ಕೆಟ್ಟರೆ ಬದುಕು ಘೋರವಾಗುತ್ತದೆ. ಆದ್ದರಿಂದ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೀವು ಎಂದಿಗೂ ಹೊಂದಾಣಿಕೆಯ ಜೀವನ ನಡೆಸಿ ಸುಖ-ಸಂತೋಷದಿಂದ ಬಾಳಿರಿ ಎಂದರು.
ಜೀವನ ಹೂವಿನ ಹಾಸಿಗೆಯಲ್ಲ. ಕಷ್ಟ-ನಷ್ಟಗಳು ಎದುರಾಗುತ್ತವೆ. ಮನೆಯಲ್ಲಿನ ಹಿರಿಯ ಮಾರ್ಗದರ್ಶನವನ್ನು ಪಡೆದುಕೊಂಡು ಜೀವನದಲ್ಲಿ ಯಾವ ಎಡರು-ತೊಡರುಗಳ ಬಾರದಂತೆ ನಿಮ್ಮ ಜೀವನ ಸಾಗಿಸಿ. ಶ್ರೀ ವೀರಪ್ಪಜ್ಜನವರ ಕೃಪಾಶೀರ್ವಾದದಡಿಯಲ್ಲಿ ನೀವು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೀರಿ. ಶ್ರೀ ವೀರಪ್ಪಜ್ಜನವರು ನಿಮಗೆ ಸಕಲ ಸನ್ಮಂಗಲಗಳನ್ನುಂಟುಮಾಡುತ್ತಾರೆ ಎಂದರು.
ಶ್ರೀ ವೀರಪ್ಪಜ್ಜನವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಡಾ. ಮಲ್ಲಯ್ಯ ಚಪ್ಪನ್ನಮಠ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ದಿಂಡೂರ, ಎಂ.ಎ. ಹಿರೇವಡೆಯರ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವೇ.ಮೂ ರುದ್ರಮನಿ ಶಾಸ್ತ್ರಿ ಹಿರೇಮಠರು ವಿವಾಹ ಕಾರ್ಯಗಳನ್ನು ನೆರವೇರಿಸಿದರು. ನೂರಾರು ಭಕ್ತರು ನೂತನ ದಂಪತಿಗಳನ್ನು ಆಶೀರ್ವದಿಸಿದರು. ಸಾಮೂಹಿಕ ವಿವಾಹದಲ್ಲಿ ಐದು ಜೊತೆ ಜೋಡಿಗಳು ನೂತನ ದಾಂಪತ್ಯಕ್ಕೆ ಕಾಲಿಟ್ಟರು. ಸಮಾರಂಭದಲ್ಲಿ ಟ್ರಸ್ಟ್ ಕಮಿಟಿಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು.



