ಹುಬ್ಬಳ್ಳಿ:– ಕನ್ನಡದಲ್ಲಿ ವಿಡಿಯೋಗಳನ್ನ ಮಾಡುತ್ತಾ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಉತ್ತರ ಕರ್ನಾಟಕದ ಪ್ರತಿಭೆ ಖ್ಯಾತ ಯುಟ್ಯೂಬರ್‌ಗೆ ಇದೀಗ ಭೀಕರ ಆಘಾತ ಎದುರಾಗಿದೆ.
ಸುಳ್ಳು ದಾಖಲೆ ನೀಡಿ ಹಿಂದೂ ಯುವತಿಯ ಜೊತೆಗೆ ಮದುವೆ ಆರೋಪ ಹಿನ್ನೆಲೆ ಖ್ಯಾತ ಯೂಟ್ಯೂಬರ್ ಕ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ವಿರುದ್ಧ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಯುವತಿಯ ಹೆತ್ತವರು ಹಿಂದೂಪರ ಸಂಘಟನೆಗಳ ಜೊತೆಗೆ ಠಾಣೆಗೆ ಆಗಮಿಸಿ ಮುಕಳೆಪ್ಪ ವಿರುದ್ಧ ಜೀವ ಬೆದರಿಕೆ ಮತ್ತು ಅಪಹರಣ ಪ್ರಕರಣ ದಾಖಲಿಸಿದ್ದಾರೆ.
ರೀಲ್ಸ್ ಮಾಡುವ ನೆಪದಲ್ಲಿ ಮುಕಳೆಪ್ಪ ಮದುವೆ ಸಮಾರಂಭದ ವೇದಿಕೆ ಸಿದ್ಧಪಡಿಸಿದ್ದ. ನಾಲ್ಕು ತಿಂಗಳ ಹಿಂದೆ ನಮ್ಮ ಮಗಳನ್ನು ಆತ ಅಪಹರಿಸಿಕೊಂಡು ಹೋಗಿ ಮದುವೆಯಾಗಿದ್ದಾನೆ. ಆಗ ಅದು ರೀಲ್ಸ್ ಎಂದಿದ್ದ ಮುಕುಳೆಪ್ಪ, ಈಗ ನಿಜವಾಗಿ ಮದುವೆಯಾಗಿದ್ದೇನೆ ಎನ್ನುತ್ತಿದ್ದಾನೆ. ಇದು ಸುಳ್ಳು ಮದುವೆ. ನಮ್ಮ ಮಗಳನ್ನು ವಾಪಸ್ ಕಳುಹಿಸಿಕೊಡಿ ಎಂದಿದ್ದಕ್ಕೆ ಫೋನ್ ಮಾಡಿ ಧಮ್ಕಿ ಹಾಕುತ್ತಿದ್ದಾನೆ. ಮುಕಳೆಪ್ಪನನ್ನು ಕೂಡಲೇ ಬಂಧಿಸಿ, ನಮ್ಮ ಮಗಳನ್ನು ವಾಪಸ್ ಕಳುಹಿಸಿಕೊಡಿ ಎಂದು ಯುವತಿಯ ಹೆತ್ತವರು ಠಾಣೆಗೆ ದೂರು ನೀಡಿದ್ದಾರೆ.
ಮುಕಳೆಪ್ಪ ಮೂಲತಃ ಇಸ್ಲಾಂ ಧರ್ಮಕ್ಕೆ ಸೇರಿದವನಾಗಿದ್ದು, ನಕಲಿ ದಾಖಲೆ ಕೊಟ್ಟು ಹಿಂದೂ ಯುವತಿಯನ್ನ ವಿವಾಹವಾಗಿದ್ದಾನೆ. ಇದು ಲವ್ ಜಿಹಾದ್ ಎಂದು ಬಜರಂಗದಳ ಕಾರ್ಯಕರ್ತರು ದೂರಿನಲ್ಲಿ ಆರೋಪಿಸಿದ್ದಾರೆ.