ತುಮಕೂರು:- ಜಿಲ್ಲೆಯ ಕುಣಿಗಲ್ ತಾಲೂಕಿನ ಯಡೆಯೂರಿನಲ್ಲಿ ಸಿನಿಮೀಯ ದೃಶ್ಯದಂತೆ ಹೋಲುವ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ.
ತನಗೆ ವಿಚ್ಛೇದನ ನೀಡದೆ ಮತ್ತೊಂದು ಮದುವೆ ಮಾಡಿಕೊಳ್ಳಲು ಹೊರಟಿದ್ದ ಪತಿ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಕಲ್ಯಾಣ ಮಂಟಪಕ್ಕೆ ಪೊಲೀಸರ ಜೊತೆ ನುಗ್ಗಿ ಪತ್ನಿ ಶಾಕ್ ಕೊಟ್ಟಿದ್ದಾಳೆ. ಥೇಟ್ ಸಿನಿಮಾ ಶೈಲಿಯ ದೃಶ್ಯ ನೆರೆದಿದ್ದವರನ್ನು ಅಚ್ಚರಿಗೊಳಿಸಿದ್ದು, ಪತ್ನಿಗೆ ಗೊತ್ತಾಗದಂತೆ ಮತ್ತೊಂದು ಮದುವೆ ಮಾಡಲಾಗ್ತಿತ್ತು ಎಂಬ ಆರೋಪ ಕೇಳಿಬಂದಿದೆ.
ಲೇಪಾಕ್ಷಿ ಎಂಬಾಕೆಯನ್ನ ಹರಿಪ್ರಸಾದ್ ಎಂಬುವವರು 2014ರಲ್ಲಿ ಮದುವೆ ಆಗಿದ್ದರು. ಮದುವೆ ಬಳಿಕ 10 ವರ್ಷ ಸಂಸಾರವನ್ನೂ ನಡೆಸಿದ್ದರು. ಆ ಬಳಿಕ ಕೌಟುಂಬಿಕ ಕಲಹದ ಕಾರಣಕ್ಕೆ ದಂಪತಿ ಬೇರೆಯಾಗಿದ್ದರು. ಈ ನಡುವೆ ಲೇಪಾಕ್ಷಿಗೆ ಗೊತ್ತಾಗದಂತೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ನಿಟ್ಟೂರು ಗ್ರಾಮದ ಯುವತಿಯ ಜೊತೆಗೆ ಮದುವೆಗೆ ಹರಿಪ್ರಸಾದ್ ಮುಂದಾಗಿದ್ದಾರೆ. ಅದರಂತೆ ಯಡೆಯೂರಿನ SLN ಕಲ್ಯಾಣ ಮಂಟಪದಲ್ಲಿ ಇಂದು ಬೆಳಗ್ಗೆ ಪೊಲೀಸರ ಜೊತೆ ಲೇಪಾಕ್ಷಿ ಎಂಟ್ರಿ ಕೊಟ್ಟಿದ್ದಾರೆ.
ಇನ್ನು ಪತ್ನಿ ಕಂಡು ಹರಿಪ್ರಸಾದ್ ಕಕ್ಕಾಬಿಕ್ಕಿಯಾಗಿದ್ದರೆ, ನನಗೆ ಡಿವೋರ್ಸ್ ಕೊಡದೆ ಮೋಸ ಮಾಡಿದ್ದೀಯಾ ಅಂತ ಗಲಾಟೆ ತೆಗೆದ ಲೇಪಾಕ್ಷಿ ಕೊನೆಗೂ ಮದುವೆ ನಿಲ್ಲಿಸಿದ್ದಾರೆ. ಮತ್ತೊಂದು ಮದುವೆಯ ಆಸೆಯಲ್ಲಿ ಹಸೆಮಣೆ ಏರಿದ್ದ ಹರಿಪ್ರಸಾದ್, ತಾಳಿ ಕಟ್ಟದೆ ಪೊಲೀಸ್ ಠಾಣೆಗೆ ತೆರಳಿದ ಪ್ರಸಂಗ ನಡೆದಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದರೆ, ಮತ್ತೊಂದೆಡೆ ಲೇಪಾಕ್ಷಿ ಕುಟುಂಬಸ್ಥರು ಹರೀಶ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.



