ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಯ ದಂಡಿನ ದುರ್ಗಾದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಅಂಗವಾಗಿ ಸಾಮೂಹಿಕ ಸೀಮಂತ ಕಾರ್ಯಕ್ರಮವು ಸಡಗರ ಸಂಭ್ರಮದಿಂದ ಜರುಗಿತು.
ದಂಡಿನ ದುರ್ಗಾದೇವಿ ಸೇವಾ ಸಮಿತಿಯು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗ್ರಾಮದ 18 ಗರ್ಭಿಣಿಯರು ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಸೋಬಾನೆ ಪದಗಳನ್ನು ಹಾಡುವ ಮೂಲಕ ಮನರಂಜಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಂಕ್ರಯ್ಯ ಶಾಸ್ತ್ರಿಗಳು ಹಿರೇಮಠ, ನವರಾತ್ರಿ ಆಚರಣೆಯಲ್ಲಿ ಸಾಮೂಹಿಕ ಸೀಮಂತ ನೆರವೇರಿಸಿಕೊಳ್ಳುವ ಗರ್ಭಿಣಿಯರಿಗೆ ಸರಳ ಹೆರಿಗೆ ಆಗುವುದರೊಂದಿಗೆ ಆರೋಗ್ಯವಂತ ಮಗುವು ಜನಿಸುತ್ತದೆ. ತಾಯಿಂದಿರು ತಮ್ಮ ಮಗುವಿಗೆ ಉತ್ತಮ ಸಂಸ್ಕಾರ ನೀಡಿ ಈ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು ಎಂದರು.
ಸೇವಾ ಸಮಿತಿ ಸದಸ್ಯ ನಜೀರಅಹ್ಮದ ಕೀರಿಟಗೇರಿ ಮಾತನಾಡಿ, ಕಳೆದ 25 ವರ್ಷದಿಂದ ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ದೇವಿ ಪುರಾಣದ ಜತೆಗೆ ಗ್ರಾಮದ ಸರ್ವ ಜಾತಿ, ಧರ್ಮದವರ ಗರ್ಭಿಣಿಯರ ಸಾಮೂಹಿಕ ಸೀಮಂತ ಕಾರ್ಯಕ್ರಮವು ಭಾವೈಕ್ಯತೆಯನ್ನು ಮೂಡಿಸುತ್ತಿದೆ ಎಂದರು.
ಸೀಮಂತದಲ್ಲಿ ಪಾಲ್ಗೊಂಡ ಲಕ್ಷ್ಮೀ, ಮಾಲಾ ಮಾತನಾಡಿ, ನಮ್ಮ ಕುಟುಂಬದವರು ಮಾಡುವ ಸೀಮಂತ ಕಾರ್ಯದ ಫಲಕ್ಕಿಂತ ದೇವಿ ಪುರಾಣದ ಸಾಮೂಹಿಕ ಸೀಮಂತ ಕಾರ್ಯದಿಂದ ನನಗೆ ಮತ್ತು ನನ್ನ ಮಗುವಿಗೆ ದೇವಿಯ ಆಶೀರ್ವಾದ ದೊರೆಯುತ್ತಿರುವುದು ಸಂತಸ ತಂದಿದೆ ಎಂದರು.
ಪ್ರವಚನಕಾರರಾದ ಕೊಟ್ರಯ್ಯ ಶಾಸ್ತ್ರಿಗಳು ನರಗುಂದಮಠ ಅವರು ಸಾಮೂಹಿಕ ಸೀಮಂತ ಕಾರ್ಯ ಮತ್ತು ದೇವಿ ಪುರಾಣ ಕಾರ್ಯಕ್ರಮದ ಕುರಿತು ವಿವರಿಸಿದರು. ಮಂಜುನಾಥ ಗರ್ಜಪ್ಪನವರ, ಈರಪ್ಪ ಕರಿಯಲ್ಲಪ್ಪನವರ ಸಂಗೀತ ಸೇವೆ ನೀಡಿದರು. ಸೇವಾ ಸಮಿತಿಯ ಅಧ್ಯಕ್ಷ ರುದ್ರಪ್ಪ ಮುಸ್ಕಿನಭಾವಿ, ತಾ.ಪಂ ಮಾಜಿ ಅಧ್ಯಕ್ಷ ಎಂ.ಎನ್. ಉಮಚಗಿ, ಶಿವಣ್ಣ ಸಜ್ಜನರ, ನಜೀರಅಹ್ಮದ ಕೀರಿಟಗೇರಿ, ವೀರಯ್ಯ ಗಂಧದ, ಮಂಜುನಾಥ ಪುರದ, ಪ್ರೇಮಾ ಮಟ್ಟಿ, ನೀಲಮ್ಮ ವಡ್ಡರ, ಸಾವಿತ್ರಿ ಯಲಿಶಿರುಂಜ, ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.



