HomeGadag Newsಹಕ್ಕುಪತ್ರ ನೀಡದಿದ್ದರೆ ಸಾಮೂಹಿಕ ಆತ್ಮಹತ್ಯೆ

ಹಕ್ಕುಪತ್ರ ನೀಡದಿದ್ದರೆ ಸಾಮೂಹಿಕ ಆತ್ಮಹತ್ಯೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಯಲ್ಲಾಪೂರ ತಾಂಡಾದ ಬಡ ರೈತರು ಗುಡಗೇರಿ ಸಂಸ್ಥಾನದ ಕಾಲದಿಂದಲೂ ಸಾಗುವಳಿ, ಉಳುಮೆ ಮಾಡಿಕೊಂಡು ಬಂದಿರುವ ಜಮೀನುಗಳನ್ನು ಸಕ್ರಮಗೊಳಿಸಿ ಮಾಲೀಕತ್ವದ ಹಕ್ಕನ್ನು ನೀಡಬೇಕೆಂದು ಕರ್ನಾಟಕ ಪ್ರದೇಶ ಲಂಬಾಣಿ ಬಂಜಾರ ಶ್ರೀ ಸೇವಾಲಾಲ ಕಲ್ಯಾಣ ಸಂಘದ ಜಿಲ್ಲಾ ಅಧ್ಯಕ್ಷ ರವಿಕಾಂತ ಅಂಗಡಿ, ತಾಲೂಕಾಧ್ಯಕ್ಷ ದೀಪಕ ಲಮಾಣಿ ಆಗ್ರಹಿಸಿದರು.

ಅವರು ತಾಲೂಕಿನ ಯಲ್ಲಾಪೂರ ತಾಂಡಾದ ಜನರು ಉಳುಮೆ ಮಾಡಿಕೊಂಡು ಬರುತ್ತಿರುವ ಜಮೀನುಗಳನ್ನು ಸಕ್ರಮಗೊಳಿಸುವಂತೆ ಆಗ್ರಹಿಸಿ ತಹಸೀಲ್ದಾರ ಧನಂಜಯ ಅವರಿಗೆ ಮನವಿ ನೀಡಿ ಮಾತನಾಡಿದರು.

ತಾಲೂಕಿನ ವ್ಯಾಪ್ತಿಗೆ ಒಳಪಡುವ ಯಲ್ಲಾಪೂರ ತಾಂಡಾದ ಕಡುಬಡವರು ಯಾವುದೇ ಮೂಲಸೌಲಭ್ಯಗಳಿಲ್ಲದೇ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ. ಬಾಲೇಹೊಸೂರ ಗ್ರಾಮದ ಸರಹದ್ದಿನಲ್ಲಿನ ಗಾಯರಾಣಾವ ಹುಲ್ಲುಗಾಡಿನ ಗೋಮಾಳಗಳಲ್ಲಿನ ರಿ.ಸ.ನಂ.364ರಿಂದ 416ರವರೆಗಿನ ಸರ್ವೆ ನಂಬರಿನಲ್ಲಿ ತಮ್ಮ ಕೃಷಿ ಉಪಜೀವನಕ್ಕಾಗಿ ಸರಿಸಮಾರು 1941-42ನೇ ಸಾಲಿನ ಗುಡಗೇರಿ ಸಂಸ್ಥಾನದ ಕಾಲದಿಂದಲೂ ಸಾಗುವಳಿ, ಉಳುಮೆ ಮಾಡಿಕೊಂಡು ಬಂದಿದ್ದಾರೆ.

ಇವೇ ಕೃಷಿ ಭೂಮಿಯಲ್ಲಿ ಸಾಗುವಳಿ ಮಾಡಿ ಅದರಲ್ಲಿ ಬಂದ ಫಸಲಿನಿಂದ ಜೀವನೋಪಾಯವನ್ನು ನಡೆಸುತ್ತಾ ಬಂದಿದ್ದಾರೆ. ಸರ್ವೋಚ್ಚ ನ್ಯಾಯಾಲಯವು ನಮ್ಮಂತಹ ಗುಡ್ಡಗಾಡು ಪ್ರದೇಶ ಮತ್ತು ಅರಣ್ಯವನ್ನು ಅವಲಂಬಿತ ಬುಡಕಟ್ಟು, ಅಲೆಮಾರಿ, ಅರಣ್ಯವಾಸಿ, ಗುಡ್ಡಗಾಡು ಪ್ರದೇಶಗಳಲ್ಲಿ, ಅರಣ್ಯ ಅವಲಂಬಿತ ಜನಾಂಗಗಳಿಗೆ ಕೃಷಿಯ ಉದ್ದೇಶಕ್ಕಾಗಿ ಸಾಗುವಳಿ ಮಾಡಿದ ಅರಣ್ಯ ಪ್ರದೇಶದ ಆಸ್ತಿ ಹಕ್ಕು ಪತ್ರ ಕೊಡಲು ಆದೇಶಿಸಿದ್ದು, ಸಾಗುವಳಿ ಮಾಡಿ ಜೀವನೋಪಾಯ ಮಾಡುತ್ತಿರುವ ಎಲ್ಲರೂ ತಮ್ಮ ಸಂಪೂರ್ಣ ಸಾಗುವಳಿ ಮಾಡಿರುವ ಜಮೀನುಗಳನ್ನು ಸರ್ವೇಯರ್‌ರವರಿಂದ ಅಳತೆ ಮಾಡಿಸಿ, ಜಿಲ್ಲಾಧಿಕಾರಿಗಳ ಮುಖಾಂತರ ಅರಣ್ಯ ಹಕ್ಕು ಸಮಿತಿಯಲ್ಲಿ ನಮ್ಮ ಅರ್ಜಿಗಳನ್ನು ಕಳುಹಿಸದೇ ಯಾವುದೇ ಬಲವಾದ ಕಾರಣಗಳಿಲ್ಲದೇ ಲಕ್ಷೇಶ್ವರ ತಾಲೂಕಾ ದಂಡಾಧಿಕಾರಿಗಳು ನಮ್ಮ ಅರ್ಜಿಗಳನ್ನು ತಿರಸ್ಕರಿಸಿದ್ದು ನೂರಾರು ಕುಟುಂಬಗಳಿಗೆ ಬರಸಿಡಿಲು ಬಡಿದಂತಾಗಿದೆ ಎಂದು ಹೇಳಿದರು.

ಇಲ್ಲಿರುವ ಜನರಿಗೆ ಕೃಷಿಯನ್ನು ಹೊರತುಪಡಿಸಿ ಬೇರೆ ಯಾವ ಉದ್ಯೋಗವೂ ಬರುವುದಿಲ್ಲ. ಒಂದು ವೇಳೆ ನಮಗೆ ಸದರ ಜಮೀನಿನಿಂದ ಒಕ್ಕಲೆಬ್ಬಿಸಿ ಸಾಗುವಳಿ ಜಮೀನನ್ನು ಸಕ್ರಮಗೊಳಿಸಿ ನಮಗೆ ಹಕ್ಕು ಪತ್ರವನ್ನು ನೀಡದಿದ್ದರೆ ನಾವು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ ಧನಂಜಯ, ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವದಾಗಿ ಹೇಳಿದರು. ಈ ಸಂದರ್ಭದಲ್ಲಿ ಶೇಖಪ್ಪ ಲಮಾಣಿ (ಅಕ್ಕಿಗುಂದ), ಗಣೇಶ ಲಮಾಣಿ, ಸೋಮಣ್ಣ ಲಮಾಣಿ, ಮಹಾದೇವಪ್ಪ ಲಮಾಣಿ, ಚನ್ನಪ್ಪ ಲಮಾಣಿ, ತಿಪ್ಪಣ್ಣ ಲಮಾಣಿ, ಶೇಖಪ್ಪ ಲಮಾಣಿ, ಕೃಷ್ಣ ಲಮಾಣಿ, ಬಾವಣವ್ವ ಲಮಾಣಿ, ಗಂಗವ್ವ ಲಮಾಣಿ, ಶಾಂತವ್ವ ಲಮಾಣಿ ಸೇರಿದಂತೆ ನೂರಾರು ಜನರಿದ್ದರು.

ಗದಗ ಜಿಲ್ಲೆಯ ಇತರೆ ತಾಲೂಕುಗಳಲ್ಲಿಯೂ ಕೂಡಾ ಅನೇಕ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲಾಗಿದೆ. ಆದರೆ ಹತ್ತಾರು ದಶಕಗಳಿಂದ ಸದರ ಭೂಮಿಯ ಮೇಲೆ ಅವಲಂಬಿತರಾದ ನಮಗೆ ಹಕ್ಕು ಪತ್ರ ನೀಡದೇ ಉದ್ದೇಶಪೂರ್ವಕವಾಗಿ ನಮ್ಮನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿರುವುದು ವಿಷಾದನೀಯ ಎಂದು ರವಿಕಾಂತ ಅಂಗಡಿ ಆರೋಪಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!