ಮಂಗಳೂರು:- ಮಂಗಳೂರಿನ ಮಸಾಜ್ ಪಾರ್ಲರ್ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಧಪಟ್ಟಂತೆ ಎಲ್ಲಾ 14 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಎಲ್ಲಾ ಆರೋಪಿಗಳಿಗೂ ಫೆಬ್ರವರಿ 7ರ ತನಕ ಮಂಗಳೂರು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಪೊಲೀಸರು ಜಾಮೀನು ರಹಿತ ಪ್ರಕರಣಗಳನ್ನು ಆರೋಪಿಗಳ ಮೇಲೆ ವಿಧಿಸಿದ್ದಾರೆ.
ಮಸಾಜ್ ಪಾರ್ಲರ್ನಲ್ಲಿ ಅನೈತಿಕ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ನಿನ್ನೆ ಮಧ್ಯಾಹ್ನ ಬಿಜೈ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿಯಿರುವ ಕಲರ್ಸ್ ಯೂನಿಸೆಕ್ಸ್ ಸೆಲೂನ್ ಮೇಲೆ ರಾಮ ಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ ನಾಯಕತ್ವದ ಗ್ಯಾಂಗ್ ದಾಳಿ ನಡೆಸಿತ್ತು. ಇದು ರಾಜ್ಯಾದ್ಯಂತ ಸದ್ದು ಮಾಡಿತ್ತು.
ಪಾರ್ಲರ್ ಗೆ ಏಕಾಏಕಿ ನುಗ್ಗಿ, ಅಲ್ಲಿರುವ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದರು. ಈ ರೀತಿ ದಾಳಿ ನಡೆಸುವುದು ತಪ್ಪು, ದಾಳಿಕೋರರನ್ನು ಕೂಡಲೇ ಬಂಧಿಸುವಂತೆ ಗೃಹ ಸಚಿವ ಜಿ ಪರಮೇಶ್ವರ್ ಸೂಚನೆ ನೀಡಿದ ಬೆನ್ನಲ್ಲೆ ರಾಮಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ ಸೇರಿದಂತೆ 14 ಜನರನ್ನು ಪೊಲೀಸರು ಬಂಧನ ಮಾಡಿದ್ದರು. ಸದ್ಯ ಈ ಎಲ್ಲಾ ಆರೋಪಿಗಳನ್ನು ಮಂಗಳೂರು ನ್ಯಾಯಾಲಯ ಫೆಬ್ರವರಿ 7ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.