ವಿಜಯಸಾಕ್ಷಿ ಸುದ್ದಿ, ಗದಗ: ಗಿನ್ನೆಸ್ ವಿಶ್ವದಾಖಲೆ ಸ್ಥಾಪಿಸುವ ಮಹತ್ತರ ಗುರಿಯೊಂದಿಗೆ ಈಶ್ವರೀಯ ವಿಶ್ವವಿದ್ಯಾಲಯವು ದೇಶಾದ್ಯಂತ ಬೃಹತ್ ರಕ್ತದಾನ ಅಭಿಯಾನವನ್ನು ಹಮ್ಮಿಕೊಂಡಿದ್ದು, ಗದಗ-ಬೆಟಗೇರಿಯಲ್ಲೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಹೇಳಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಬೃಹತ್ ಅಭಿಯಾನದ ಮೂಲಕ ಭಾರತ ಮತ್ತು ನೇಪಾಳದಾದ್ಯಂತ ಕೇವಲ 100 ಗಂಟೆಗಳಲ್ಲಿ 1 ಲಕ್ಷಕ್ಕೂ ಅಧಿಕ ಯೂನಿಟ್ ರಕ್ತ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ. ಈ ಸಾಧನೆಯು ಗಿನ್ನೆಸ್ ವಿಶ್ವ ದಾಖಲೆಯಾಗಿ ಹೊರಹೊಮ್ಮುವ ವಿಶ್ವಾಸವಿದೆ ಎಂದರು.
ಅಭಿಯಾನದ ಭಾಗವಾಗಿ ಗದಗ ಜಿಲ್ಲೆಯ ವಿವಿಧೆಡೆ ನಾಲ್ಕು ದಿನಗಳ ಕಾಲ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ. ಆ. 22ರಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಸಿದ್ಧರಾಮೇಶ್ವರ ನಗರದಲ್ಲಿರುವ ಆಧ್ಯಾತ್ಮಿಕ ಸಂಸ್ಕೃತಿ ಭವನದಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ಆ. 23ರಂದು ಹುಲಕೋಟಿಯ ಬ್ರಹ್ಮಕುಮಾರಿ ಸಭಾಂಗಣದಲ್ಲಿ, ಆ. 24ರಂದು ಗಜೇಂದ್ರಗಡ ತಾಲೂಕಿನ ನರೇಗಲ್‌ನ ಬ್ರಹ್ಮಾಕುಮಾರಿ ಸಭಾಂಗಣದಲ್ಲಿ, ಆ. 25ರಂದು ಬೆಟಗೇರಿಯ ಬ್ರಹ್ಮಾಕುಮಾರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈ ಅಭಿಯಾನವು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ರೆಡ್ ಕ್ರಾಸ್ ಸೊಸೈಟಿ, ವಿವಿಧ ಸರ್ಕಾರಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು, ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಸೇರಿದಂತೆ ಹಲವಾರು ಸಂಸ್ಥೆಗಳ ಸಹಯೋಗದೊಂದಿಗೆ ನಡೆಯುತ್ತಿದೆ. ಗದಗದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಕೆ.ಎಚ್. ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆಯ ಸಹಯೋಗವಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿ.ಕೆ. ರೇಖಾ, ಬಿ.ಕೆ. ಉಮಾದೇವಿ, ಬಿ.ಕೆ. ಸವಿತಾ, ಬಿ.ಕೆ. ಸಾವಿತ್ರಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಆಗಸ್ಟ್ 22ರಂದು ಬೆಳಿಗ್ಗೆ 10 ಗಂಟೆಗೆ ಗದಗ ನಗರದ ಬ್ರಹ್ಮಾಕುಮಾರಿಸ್ ಸಭಾಂಗಣದಲ್ಲಿ ನಡೆಯಲಿದ್ದು, ಕೆ.ಎಚ್. ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ. ಬಸವರಾಜ್ ಬೊಮ್ಮನಹಳ್ಳಿ ಹಾಗೂ ವೈದ್ಯಾಧಿಕಾರಿ ಡಾ. ಗಿರೀಶ್ ನಾಗರಾಳ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಕ್ತದಾನ ಮಾಡಲು ಹೆಸರು ನೋಂದಾಯಿಸುವುದು ಕಡ್ಡಾಯವಾಗಿದ್ದು, ಆಸಕ್ತರು-6360753992 ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಬ್ರಹ್ಮಕುಮಾರಿ ಜಯಂತಿ ಅಕ್ಕನವರು ತಿಳಿಸಿದರು.