ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಅಗಸ್ತ್ಯರ್ಥದ ಬಳಿ ದನದ ಶೆಡ್ಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಭೀಕರ ದುರಂತ ಸಂಭವಿಸಿದೆ. ಈ ಅವಘಡದಲ್ಲಿ ಶೆಡ್ಡಿನಲ್ಲಿದ್ದ ಆಕಳು ಹಾಗೂ ಕರುಗಳು ಜೀವಂತವಾಗಿ ಸುಟ್ಟು ಸಾವನ್ನಪ್ಪಿದ್ದು, ಇನ್ನೂ ಎರಡು ಹಸುಗಳು ಗಂಭೀರವಾಗಿ ಗಾಯಗೊಂಡಿವೆ.
ಮಲ್ಲಪ್ಪ ಉಮಚುಗಿ ಎಂಬ ರೈತನಿಗೆ ಸೇರಿದ ಈ ದನದ ಶೆಡ್ಡಿನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ, ಒಳಗಿದ್ದ ಪಶುಗಳು ಪಾರಾಗಲು ಸಾಧ್ಯವಾಗದೆ ಸಂಪೂರ್ಣ ಸುಟ್ಟು ಕರಕಲಾಗಿವೆ. ಜೊತೆಗೆ ಶೆಡ್ಡಿನಲ್ಲಿದ್ದ ಶೇಂಗಾ ಹೊಟ್ಟು ಮತ್ತು ಮೇವು ಸಹ ಬೆಂಕಿಗೆ ಆಹುತಿಯಾಗಿ ಸಂಪೂರ್ಣ ಭಸ್ಮವಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಈ ಘಟನೆ ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



