ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಶಹರ ವ್ಯಾಪ್ತಿಯಲ್ಲಿ ನಡೆದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಮೂಲದ ಮೂವರು ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾಹಿತಿ ನೀಡಿದರು.
ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತ ಆರೋಪಿಗಳಿಂದ 20,29,500 ರೂ. ಮೌಲ್ಯದ 401 ಗ್ರಾಂ ಬಂಗಾರದ ಆಭರಣಗಳು, 2.80 ಲಕ್ಷ ರೂ. ಮೌಲ್ಯದ 2.8 ಕೆಜಿ ಬೆಳ್ಳಿ ವಸ್ತುಗಳು, ಕಳ್ಳತನಕ್ಕೆ ಬಳಸಿದ 1.50 ಲಕ್ಷ ರೂ. ಮೌಲ್ಯದ ಕಾರ್ ವಶಪಡಿಸಿಕೊಳ್ಳಲಾಗಿದೆ. ಬೆಳಗಾವಿಯ ವೈಭವ ನಗರದ ಖಾಜಾ ಶೇಖ್ (34), ಅರ್ಮಾನ್ ಶೇಖ್ (19) ಹಾಗೂ ಮೆಹಬೂಬ ಮುಲ್ಲಾ (18) ಎನ್ನುವ ಯುವಕರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಆರೋಪಿಗಳ ಪೈಕಿ ಖಾಜಾ ಶೇಖ್ ಎನ್ನುವ ವ್ಯಕ್ತಿ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ. ಈ ಹಿಂದೆ ಬೆಳಗಾವಿ, ಹೊಸಪೇಟೆ, ಬಳ್ಳಾರಿ ಮತ್ತು ಗುಂತಕಲ್‌ನಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ ಎಂದರು.
2024 ಮೇ 23ರಿಂದ 27ರ ನಡುವಿನ ಅವದಿಯಲ್ಲಿ ಗಣೇಶ ಕಾಲೋನಿಯ 2ನೆ ಕ್ರಾಸಿನಲ್ಲಿರುವ ಶೇಖರಗೌಡ ಪಾಟೀಲ ಅವರ ಮನೆ ಕಳ್ಳತನವಾಗಿರುವ ಬಗ್ಗೆ ಶಹರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಉತ್ತರ ವಲಯ ಐಜಿಪಿ ವಿಕಾಸಕುಮಾರ ವಿಕಾಸ್ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಅಧೀಕ್ಷಕ ಎಂ.ಬಿ. ಸಂಕದ, ಡಿಎಸ್‌ಪಿ ಜೆ.ಎಚ್. ಇನಾಂದಾರ, ಪ್ರಭುಗೌಡ ಕಿರೇದಳ್ಳಿ, ಪೊಲೀಸ್ ಇನ್ಸಪೆಕ್ಟರ್ ಡಿ.ಬಿ. ಪಾಟೀಲ ನೇತೃತ್ವದ ತಂಡ ಜೂನ್ 19ರಂದು ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಮಾಹಿತಿ ನೀಡಿದ ಅವರು, ಈ ಕಳ್ಳತನ ಪ್ರಕರಣ ಬೇಧಿಸಿದ ತಂಡಕ್ಕೆ ಬಹುಮಾನ ಘೋಷಣೆ ಮಾಡಲಾಗುವುದು ಎಂದರು.
25.28 ಲಕ್ಷ ರೂ. ಮೌಲ್ಯದ ಮೊಬೈಲ್ ಪತ್ತೆ
ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನವಾದ ಒಟ್ಟು 25.28 ಲಕ್ಷ ರೂ. ಮೌಲ್ಯದ 158 ಮೊಬೈಲ್‌ಗಳನ್ನು ಪತ್ತೆ ಹಚ್ಚಿ, ಸಾರ್ವಜನಿಕರಿಗೆ ಮರಳಿಸಲಾಗಿದೆ. 2023 ಫೆಬ್ರವರಿಯಿಂದ ಈವರೆಗೆ ಒಟ್ಟು 2992 ದೂರುಗಳು ದಾಖಲಾಗಿದ್ದು. ಅದರಲ್ಲಿ ಒಟ್ಟು 1.32 ಕೋಟಿ ರೂ. ಮೌಲ್ಯದ 883 ಮೊಬೈಲ್‌ಗಳನ್ನು ಪತ್ತೆ ಹಚ್ಚಿ ಮೂಲ ವಾರಸುದಾರರಿಗೆ ಮರಳಿಸಲಾಗಿದೆ. ಮೊಬೈಲ್ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯ ಅಭಿನಂದನಾರ್ಹ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ತಿಳಿಸಿದರು.


