ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಭಾರತಕ್ಕೆ ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿದ್ದ ಸುಮಾರು ₹40 ಕೋಟಿ ಮೌಲ್ಯದ ಕೊಕೇನ್ ಅನ್ನು ಡಿಆರ್ ಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಭಾರತ ಮೂಲದ ಪ್ರಯಾಣಿಕನೋರ್ವ ದೋಹಾದಿಂದ ಬೆಂಗಳೂರಿಗೆ ಬಂದಿದ್ದ.
ಪ್ರಯಾಣಿಕನ ಬ್ಯಾಗೇಜ್ ಅನ್ನು ಡಿಆರ್ಐ ಅಧಿಕಾರಿಗಳು ತಪಾಸಣೆ ನಡೆಸಿದ ವೇಳೆ ಬಳಕೆ ಮಾಡದ ಎರಡು ಸೂಪರ್ ಹೀರೋ ಕಾಮಿಕ್ಸ್/ಮ್ಯಾಗಜೀನ್ಸ್ ಪತ್ತೆಯಾಗಿದೆ. ಮ್ಯಾಗಜೀನ್ ಕವರ್ ಮೇಲೆ ಸೀಲ್ ಮಾಡಿದ ರೀತಿಯಲ್ಲಿದ್ದ ಕೊಕೇನ್ ಪೌಡರ್ ಪತ್ತೆಯಾಗಿದೆ.
ಈ ಹಿನ್ನೆಲೆ ಡಿಆರ್ಐ ಅಧಿಕಾರಿಗಳು ಬಿಳಿ ಬಣ್ಣದ ಪೌಡರ್ ಅನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಪರೀಕ್ಷೆ ವೇಳೆ ಕೊಕೇನ್ ಎಂದು ಪಾಸಿಟಿವ್ ರಿಪೋರ್ಟ್ ಬಂದಿದೆ. ಬಳಿಕ ಡಿಆರ್ಐ ಅಧಿಕಾರಿಗಳು ಮ್ಯಾಗಜೀನ್ ಕವರ್ ಮೇಲಿದ್ದ ಕೊಕೇನ್ ಸಂಗ್ರಹಿಸಿ ಸುಮಾರು 4 ಕೆಜಿಯಷ್ಟು ಕೊಕೇನ್ ಜಪ್ತಿ ಮಾಡಿದ್ದಾರೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 40 ಕೋಟಿ ಮೌಲ್ಯದ ಕೊಕೇನ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಕೋಕೇನ್ ಸಾಗಾಟದ ಸಂಬಂಧಿತ ಪ್ರಯಾಣಿಕನನ್ನು ಸ್ಥಳದಲ್ಲಿಯೇ ಬಂಧಿಸಲಾಗಿದ್ದು, NDPS ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.



