ಬಡಾವಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ: ಐದು ಜನ ಅಂತರ ಜಿಲ್ಲಾ ಖದೀಮರ ಬಂಧನ!

0
Spread the love

ಗದಗ: ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಫೆಬ್ರವರಿ 16 ರಂದು ರಾತ್ರಿ ಮುಸುಕುಧಾರಿಗಳಿಂದ ನಡೆದಿದ್ದ ಕಳ್ಳತನ ಪ್ರಕರಣವನ್ನು ಬಡಾವಣೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಐದು ಜ‌ನ ಅಂತರ್ ಜಿಲ್ಲಾ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಈ ಕುರಿತು ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ, ಬಡಾವಣೆ ಪೊಲೀಸರ ಕಾರ್ಯಚರಣೆಗೆ ಪ್ರಶಂಸೆ ವ್ಯಕ್ತಪಡಿಸಿ, ಬಹುಮಾನ ಘೋಷಿಸಿದ್ದಾರೆ. ವಿಜಯನಗರ ಜಿಲ್ಲೆಯ ಮುನಿರಬಾದ್ ಬಳಿಯ ನಿರ್ಜನ ಪ್ರದೇಶದಲ್ಲಿದ್ದ ಈ ಖದೀಮರನ್ನು, ಮಾರು ವೇಷದಲ್ಲಿ ಚಾಣಾಕ್ಷತನದಿಂದ ನಡೆದ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನ ನಾಯಂಡಹಳ್ಳಿ ಮೂರನೇ ಕ್ರಾಸ್‌ನ ತರಕಾರಿ ಮಾರ್ಕೆಟ್ ಬಳಿಯ ನಿವಾಸಿ ಅಶೋಕ ತಂದೆ ಶ್ರೀನಿವಾಸ (28), ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಸಾಪೂರ ನಿವಾಸಿ ಮಂಜುನಾಥ್ ಅಲಿಯಾಸ್ ಕರಿಯಾ ತಂದೆ ನಾಗರಾಜ್ (28), ತುಮಕೂರಿನ ಹೆಬ್ಬೂರು ಹೋಬಳಿಯ ಶ್ರೀಕಂಟಯ್ಯನಪಾಳ್ಯ ನಿವಾಸಿ ಪ್ರಕಾಶ್ ಅಲಿಯಾಸ್ ಬೋಡಾ ತಂದೆ ಗಂಗಶಾನಯ್ಯ (34) ತುಮಕೂರಿನ ಉಪ್ಪಾರ ಹಳ್ಳಿ ನಿವಾಸಿ ಇಮ್ರಾನ್ ತಂದೆ ಅಮೀರ್ ಜಾನ್ (35) ಹಾಗೂ ಇನ್ನೊಬ್ಬ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಗೂಡು ತಾಲೂಕಿನ ಹೋಟಗಿ ನಿವಾಸಿ ಸಮರ್ಥ ತಂದೆ ರಮೇಶ್ ಜಾಧವ್ (19) ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಪರಾರಿಯಾಗಿದ್ದಾನೆ ಎಂದರು.

ಬಂಧಿತರಿಂದ 25ಸಾವಿರ ಹಣ ಹಾಗೂ ಮೂರು ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ. ವಿಜಯನಗರ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಬಂಧಿತ ಆರೋಪಿಗಳ ಮೇಲೆ ಕಳ್ಳತನದ ಪ್ರಕರಣಗಳು ದಾಖಲಾಗಿವೆ. ಕಳೆದ ಫೆಬ್ರವರಿ 16 ರಾತ್ರಿ ಬಡಾವಣೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ಕಳ್ಳತನ ಪ್ರಕರಣ ಪೊಲೀಸರ ನಿದ್ದೆಗೆಡಿಸಿತ್ತು.

ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಗದಗ ಪೊಲೀಸರು, ಎಸ್ಪಿ ಬಿ.ಎಸ್ ನೇಮಗೌಡ, ಹೆಚ್ಚುವರಿ ಎಸ್ಪಿ ಎಮ್ ಬಿ ಸಂಕದ, ಡಿವೈಎಸ್ಪಿ ಜೆ.ಎಚ್ ಇನಾಮದಾರ ಹಾಗೂ ನರಗುಂದ ಡಿವೈಎಸ್ಪಿ ಪ್ರಭುಗೌಡ ಕಿರೇದಹಳ್ಳಿ ಮಾರ್ಗದರ್ಶನದಲ್ಲಿ,

ಬೆಟಗೇರಿ ಸಿಪಿಐ ಧೀರಜ್ ಸಿಂಧೆ ನೇತೃತ್ವದಲ್ಲಿ, ಬಡಾವಣೆ ಪಿಎಸ್ಐಗಳಾದ ಮಾರುತಿ ಜೋಗಂಡಕರ್, ಬಿ.ಟಿ ರಿತ್ತಿ ಹಾಗೂ ಸಿಬ್ಬಂದಿಗಳಾದ ಎನ್ ಡಿ ಹುಬ್ಬಳ್ಳಿ, ಎಸ್.ಎಚ್. ಕಮತರ, ಪರಶುರಾಮ ದೊಡಮನಿ, ಅಶೋಕ ಗದಗ, ನಾಗರಾಜ್ ಬರಡಿ, ಅಕ್ಷಯ್ ಬದಾಮಿ, ಶಿವಾನಂದ ಲಮಾಣಿ, ಶಿವಕುಮಾರ್ ತಹಸೀಲ್ದಾರ್, ಗುರುರಾಜ್ ಬೂದಿಹಾಳ, ಸಂಜು ಕೊರಡೂರ ಒಳಗೊಂಡ ತಂಡ ವಿಶೇಷ ಕಾರ್ಯಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.


Spread the love

LEAVE A REPLY

Please enter your comment!
Please enter your name here