ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪ್ರಜಾಪ್ರಭುತ್ವದ ಸರ್ಕಾರವನ್ನು ಕಿತ್ತುಹಾಕಲು ನಡೆಸುತ್ತಿರುವ ಸಂಚನ್ನು ಖಂಡಿಸಿ ಪಟ್ಟಣದಲ್ಲಿ ಆಗಸ್ಟ್ 27ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಇಲ್ಲಿನ ಅಹಿಂದ ಸಮುದಾಯದ ಮುಖಂಡರು ಹೇಳಿದರು.
ಪಟ್ಟಣದ ರೋಣ ರಸ್ತೆಯ ಪ್ರವಾಸಿ ಮಂದಿರದಲ್ಲಿ ಶನಿವಾರ ತಾಲೂಕು ಅಹಿಂದ ಸಮುದಾಯದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ರಾಜ್ಯದ ಜನಸಾಮಾನ್ಯರು, ಬಡವರು, ಶೋಷಿತ ಹಾಗೂ ಹಿಂದುಳಿದ ವರ್ಗಗಳ ಪರವಾಗಿ 2ನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಿರುವ ಸಿದ್ದರಾಮಯ್ಯ ಅಹಿಂದ ವರ್ಗದ ನೇತಾರರಾಗಿದ್ದಾರೆ. ಸಿಎಂ ಸಿದ್ದರಾಮಯ್ಯರ ಜನಪ್ರಿಯತೆ ಹಾಗೂ ಅವರ ಆಡಳಿತದಲ್ಲಿನ ಜನಪರ ಕಾಳಜಿಯನ್ನು ಸಹಿಸಲಾಗದ ಕೇಂದ್ರ ಸರ್ಕಾರವು ರಾಜ್ಯಪಾಲರ ಮೂಲಕ ಸಿಎಂ ಸಿದ್ದರಾಮಯ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ರಾಜ್ಯದ ಜನರ ಸರ್ವಾಂಗೀಣ ಏಳ್ಗೆಗಾಗಿ ಉಚಿತ ಬಸ್ ಪ್ರಯಾಣ, ಮನೆಗಳಿಗೆ ಉಚಿತ ವಿದ್ಯುತ್, ನಿರುದ್ಯೋಗಿಗಳಿಗೆ ವೇತನ, ಅನ್ನಭಾಗ್ಯ ಯೋಜನೆಯ ಮೂಲಕ ಜನರ ಹಸಿವು ನೀಗಿಸುತ್ತಿರುವ ಸಿಎಂ ಸಿದ್ದರಾಮಯ್ಯ ದಕ್ಷ ಹಾಗೂ ಪ್ರಾಮಾಣಿಕ ಆಡಳಿತಗಾರರು. ಜನಪರ, ರೈತಪರ ಆಡಳಿತವನ್ನು ನೀಡುತ್ತಾ ಜನರ ಮನಸ್ಸು ಗೆದ್ದಿರುವ ಸಿದ್ದರಾಮಯ್ಯ ಅವರ ಸರ್ಕಾರವನ್ನು ಉರಳಿಸಲು ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಸುಳ್ಳು ಆರೋಪಗಳಿಗೆ ಕೇಂದ್ರ ಸರ್ಕಾರ ಕಿವಿಗೊಟ್ಟಿದೆ ಎಂದರು.
ಈ ಸಂದರ್ಭದಲ್ಲಿ ವಿ.ಆರ್. ಗುಡಿಸಾಗರ, ಅಶೋಕ ಬಾಗಮಾರ, ಎಚ್.ಎಸ್. ಸೋಂಪುರ, ಶರಣು ಪೂಜಾರ, ರವಿ ಗಡೇದವರ, ಸುಭಾನಸಾಬ ಆರಗಿದ್ದಿ, ಪ್ರಶಾಂತ ರಾಠೋಡ, ಕೆ.ಎಸ್. ಕೊಡತಗೇರಿ, ರಾಜು ಸಾಂಗ್ಲೀಕರ, ವೆಂಕಟೇಶ ಮುದಗಲ್, ಎಫ್.ಎಸ್. ಕರಿದುರಗನವರ, ಅಜ್ಜಪ್ಪ ವಂದಕುದರಿ ಸೇರಿ ಇತರರು ಇದ್ದರು.
ರಾಜ್ಯಪಾಲರ ಮೂಲಕ ಸಿದ್ದರಾಮಯ್ಯ ಅವರಿಗೆ ಅನಗತ್ಯ ತೊಂದರೆ ನೀಡುತ್ತಿರುವುದನ್ನು ಗಜೇಂದ್ರಗಡ ತಾಲೂಕು ಅಲ್ಪಸಂಖ್ಯಾತ, ಹಿಂದುಳಿದ, ದಲಿತ ಸಮುದಾಯಗಳು ಹಾಗೂ ಪ್ರಗತಿಪರರು ತೀವ್ರವಾಗಿ ಖಂಡಿಸುತ್ತೇವೆ. ರಾಜ್ಯಪಾಲರ ಈ ನಡೆಯನ್ನು ವಿರೋಧಿಸಿ ತಾಲೂಕಾ ಅಹಿಂದ ಸಮುದಾಯದಿಂದ ಆ.27ರ ಬೆಳಿಗ್ಗೆ 9.30ಕ್ಕೆ ಇಲ್ಲಿನ ಎಪಿಎಂಸಿ ಆವರಣದಿಂದ ದುರ್ಗಾ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಕಾಲಕಾಲೇಶ್ವರ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲಾಗುವುದು. ಈ ಹೋರಾಟಕ್ಕೆ ಪ್ರಗತಿಪರ, ದಲಿತಪರ, ಕನ್ನಡಪರ, ರೈತಪರವಿರುವ ಎಲ್ಲಾ ಪ್ರಜ್ಞಾವಂತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.