ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರನ್ನು ಕಾಂಗ್ರೆಸ್ ಪಕ್ಷದವರು ಲಂಚ ನೀಡಿದ ಷಡ್ಯಂತ್ರ-ಕುತಂತ್ರದಿಂದ ಲೋಕಾ ಬಲೆಗೆ ಸಿಕ್ಕಿಸಿ ಮೋಸ ಮಾಡಿದ್ದಾರೆ ಎಂದು ಬುಧವಾರ ಡಾ. ಚಂದ್ರು ಲಮಾಣಿ ಅಭಿಮಾನಿ ಬಳಗ ಹಾಗೂ ಬಂಜಾರ ಸಮಾಜದಿಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತೀವ್ರ ಅಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀಸೋಮೇಶ್ವರ ತೇರಿನ ಮನೆ ಆವರಣದಲ್ಲಿ ಲಕ್ಷ್ಮೇಶ್ವರ ಸೇರಿ ಶಿರಹಟ್ಟಿ, ಮುಂಡರಗಿ ಭಾಗದಿಂದ ಜಮಾಸಿದ ನೂರಾರು ಅಭಿಮಾನಿಗಳು, ಬಂಜಾರ ಸಮಾಜದವರು ಶಾಸಕ ಚಂದ್ರು ಲಮಾಣಿ ಅವರ ಬಂಧನಕ್ಕೆ ಹೆಣೆದ ಕುತಂತ್ರದ ವಿರುದ್ಧ ಸಿಡಿದೆದ್ದರು.
ಪ್ರತಿಭಟನಾ ರ‍್ಯಾಲಿಯುದ್ದಕ್ಕೂ ಶಾಸಕರೇ ನಾವು ನಿಮ್ಮೊಂದಿಗಿದ್ದೇವೆ ಯಾವುದೇ ಕಾರಣಕ್ಕೂ ಅಳುಕಬೇಡಿ, ಕುತಂತ್ರದಿಂದ ನಿಮ್ಮ ಏಳಿಗೆ ಸಹಿಸದವರು ಇಂತಹ ಹೇಯ ಕೃತ್ಯಕ್ಕೆ ಇಳಿಯುವ ಕಾರ್ಯ ಮಾಡಿದ್ದಾರೆ ಎಂದು ಘೋಷಣೆ ಕೂಗಿದರು. ನಮ್ಮ ಶಾಸಕ ನಮ್ಮ ಹೆಮ್ಮೆ, ಅನ್ನದಾತ ಶಾಸಕ, ಜನಪರ ಕಾಳಜಿ ಶಾಸಕ, ಪ್ರಾಮಾಣಿಕ ಸೇವಕ ಶಾಸಕ, ನಿಮ್ಮೊಂದಿಗೆ ನಾವಿದ್ದೇವೆ ಎಂಬಿತ್ಯಾದಿ ನೂರಾರು ಬಿತ್ತಿ ಪತ್ರಗಳನ್ನು ಹಿಡಿದ ಸಾವಿರಾರು ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನಾ ಮೆರವಣಿಗೆಯು ಸೋಮೇಶ್ವರ ತೇರಿನ ಮನೆಯಿಂದ ಸಾಗಿ ಕಾಶೆಟ್ಟಿಯವರ ಓಣಿ, ಪೇಟೆ ರಸ್ತೆ, ಪುರಸಭೆ ಶಿಗ್ಲಿ ನಾಕಾ ಮೂಲಕ ಹಾಯ್ದು ಹೊಸ ಬಸ್‌ನಿಲ್ದಾಣದಲ್ಲಿ ಸುಮಾರು 1 ಗಂಟೆಗೂ ಅಧಿಕ ಕಾಲ ರಸ್ತೆಯಲ್ಲಿ ಕುಳಿತು ಅಕ್ರೋಶ ವ್ಯಕ್ತಪಡಿಸಿದರು. ನಂತರ ಸಭೆಯಲ್ಲಿ ಡಾ. ಚಂದ್ರು ಲಮಾಣಿ ಅಭಿಮಾನಿ ಬಳಗದ ಹಿರಿಯ ಸದಸ್ಯ ಸುನೀಲ್ ಮಹಾಂತಶೆಟ್ಟರ, ಶಂಕರ ಮರಾಠೆ, ಅಶೋಕ ಶಿರಹಟ್ಟಿ, ತಿಮ್ಮರಡ್ಡಿ ಮರಡ್ಡಿ, ಕುಮಾರಸ್ವಾಮಿ ಹಿರೇಮಠ, ನವೀನ ಹಿರೇಮಠ, ನಾಗರಾಜ ಲಕ್ಕುಂಡಿ, ಲಿಂಗರಾಜ ಪಾಟೀಲ, ಶಿವಣ್ಣ ಲಮಾಣಿ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಅವರ ಪತ್ನಿ ಮುಡಾ ಹಗರಣದಲ್ಲಿ 14 ಸೈಟ್ ಪಡೆದು ಪ್ರಕರಣ ದಾಖಲಾಗುತ್ತಿದ್ದಂತೆಯೇ 14 ಸೈಟ್ ವಾಪಸು ಕೊಟ್ಟರಲ್ಲ, ಆಗ ಅವರ ರಾಜೀನಾಮೆ ಕೇಳಿದಿರಾ? ಅಬಕಾರಿ ಹಗರಣದಲ್ಲಿ ಆರ್.ಬಿ. ತಿಮ್ಮಾಪೂರವರು ರಾಜೀನಾಮೆ ನೀಡಿದ್ದಾರಾ ಎಂದು ಪ್ರಶ್ನಿಸಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ಡಾ. ಭೀಮಸಿಂಗ ರಾಠೋಡ, ಚವ್ಹಾಣ, ಆನಂದಗೌಡ ಪಾಟೀಲ, ಎಂ.ಎಸ್. ದೊಡ್ಡಗೌಡರ, ಶಿವಪ್ರಕಾಶ ಮಹಾಜನಶೆಟ್ಟರ, ಡಿ.ವೈ. ಹುನಗುಂದ, ಟೋಪಣ್ಣ, ಲಮಾಣಿ, ಥಾವರಪ್ಪ ಲಮಾಣಿ, ಕರಬಸಪ್ಪ ಹಂಚಿನಾಳ, ಶಿವಯೋಗಿ ಅಂಕಲಕೋಟಿ, ಫಕ್ಕಿರೇಶ ರಟ್ಟಿಹಳ್ಳಿ, ಪೂರ್ಣಾಜಿ ಖರಾಟೆ, ವಿಜಯ ಮೆಕ್ಕಿ, ರಮೇಶ್ ಧನದಮನಿ, ದೇವಪ್ಪ ಮತ್ತೂರ, ಬಸವರಾಜ ಗಾಣಗೇರ, ಈರಣ್ಣ ಪೂಜಾರ, ಜಾನು ಲಮಾಣಿ, ಸಂತೋಷ ಲಮಾಣಿ, ಗಿರೀಶ ಚೌರಡ್ಡಿ, ಮಲ್ಲೇಶಪ್ಪ ಲಮಾಣಿ, ಅಶೋಕ ಬಟಕುರ್ಕಿ, ನಿಂಗಪ್ಪ ಪ್ಯಾಟಿ, ಭೀಮಣ್ಣ ಯಂಗಾಡಿ, ಶಿವಾನಂದ ಮೆಕ್ಕಿ, ಕಲ್ಲಪ್ಪ ಹಡಪದ, ನಂದಾ ಪಲ್ಲೇದ, ಜ್ಯೋತಿ ಹಾನಗಲ್, ಅಶ್ವಿನಿ ಅಂಕಲಕೋಟಿ, ಪೂರ್ಣಿಮಾ ಪಾಟೀಲ್, ವಾಣಿ ಹತ್ತಿ, ಮಂಜುಳಾ ಗುಂಜಳ, ಮೋಹನ ಗುತ್ತೆಮ್ಮನವರ, ಶಿವಣಗೌಡರ ಕಂಟಿಗೌಡರ, ಶಂಕರ ಬಾವಿ, ಮಹೇಶ್ ಬಡ್ನಿ, ಫಕ್ಕೀರೇಶ ರಟ್ಟೆಹಳ್ಳಿ, ತಿಪ್ಪಣ್ಣ ಕೊಂಚಿಗೇರಿ, ಬಸವರಾಜ ಇಟಗಿ, ರಾಜು ಅಂದಲಗಿ ಸೇರಿದಂತೆ ಸಾವಿರಾರು ಅಭಿಮಾನಿಗಳು ಪಾಲ್ಗೊಂಡಿದ್ದರು.
ದಲಿತ ಮುಖಂಡನಾಗಿ ಈ ಭಾಗದಲ್ಲಿ ಒಳ್ಳೆಯ ಹೆಸರು ಮಾಡುತ್ತಿದ್ದ ಯುವಕ ಬೆಳೆಯುತ್ತಿರುವುದನ್ನು ಕಂಡು ಇಂತಹ ಹೇಯ ಕೃತ್ಯಕ್ಕೆ ಮುಂದಾಗಿದ್ದಾರೆ. ಬಂಜಾರ ಸಮಾಜವನ್ನು ತುಳಿಯುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು. ಷಡ್ಯಂತ್ರದ ಮೂಲಕ ದಲಿತ ಶಾಸಕರನ್ನು ಬಂಧಿಸಿ ಮಟ್ಟ ಹಾಕುವ ಹುನ್ನಾರವನ್ನು ಕಾರ್ಯಕರ್ತರು ಸಹಿಸುವುದಿಲ್ಲ, ಇಂತಹ ಗೊಡ್ಡು ಬೇದರಿಕೆಗಳಿಗೆ ಹೆದರುವುದಿಲ್ಲ ಎಂದು ಪ್ರತಿಭಟನಾಕಾರರು ಅಕ್ರೋಶ ವ್ಯಕ್ತಪಡಿಸಿದರು.



