ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರ ಸಂಘ ರಾಜ್ಯ ಸಂಘಟನೆಯ ಕರೆಯ ಮೇರೆಗೆ ಕಲ್ಕತ್ತಾದ ಆರ್.ಜಿ. ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಬರ್ಬರ ಕೊಲೆಯನ್ನು ಖಂಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ಕೈಗೊಂಡು ಗದಗ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿತು.
ಶನಿವಾರ ಗದಗ ಐಎಂಎ ಸಭಾಂಗಣದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಮಹಾತ್ಮಾ ಗಾಂಧಿ ವೃತ್ತದ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗದಗ ಜಿಲ್ಲಾಡಳಿತ ಭವನ ತಲುಪಿತು.
ಕಲ್ಕತ್ತಾದ ಆರ್.ಜಿ. ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಬರ್ಬರವಾಗಿ ಕೊಲೆಗೈದು ದುಷ್ಕರ್ಮಿಗಳು ಅಟ್ಟಹಾಸ ಮೆರೆದಿರುವದು ಅಮಾನವೀಯ ಕೃತ್ಯವಾಗಿದ್ದು, ಇಂತಹ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಬೇಕು. ತಪ್ಪಿತಸ್ಥ ಆರೋಪಿಗಳನ್ನು ತಕ್ಷಣ ಬಂಧಿಸಿ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಜರುಗಿಸಬೇಕು.
ಕೊಲೆಯಾದ ವೈದ್ಯ ವಿದ್ಯಾರ್ಥಿನಿಯ ಕುಟುಂಬಕ್ಕೆ ಒಂದು ಕೋಟಿಗಿಂತಲೂ ಹೆಚ್ಚಿನ ಮೊತ್ತದ ಪರಿಹಾರ ನೀಡಬೇಕೆಂದು ಪ್ರತಿಭಟನಾಕಾರರು ಸರಕಾರವನ್ನು ಆಗ್ರಹಿಸಿದರು. ಗದಗ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷೆ ಡಾ. ಶೃತಿಭಾವಿ ಪಾಟೀಲ, ಕಾರ್ಯದರ್ಶಿ ಡಾ. ಅನ್ನಪೂರ್ಣ ಧನ್ನೂರ, ಪದಾಧಿಕಾರಿಗಳು, ಸದಸ್ಯರು, ಗದಗ ಐಎಂಎ ಅಧ್ಯಕ್ಷ ಡಾ. ಜಿ.ಎಸ್. ಪಾಟೀಲ, ಕಾರ್ಯದರ್ಶಿ ಡಾ. ಚಂದ್ರಶೇಖರ ಬಳ್ಳಾರಿ, ಪದಾಧಿಕಾರಿಗಳು, ಸದಸ್ಯರು ಇತರ ಬೆಂಬಲಿತ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸದಸ್ಯರೊಡಗೂಡಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಗದಗ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಈ ಕುರಿತು ಅಗತ್ಯ ಕ್ರಮಕ್ಕಾಗಿ ಮನವಿಯನ್ನು ಸಂಬಂಧಿಸಿದವರಿಗೆ ರವಾನಿಸುವದಾಗಿ ಹೇಳಿದರು. ಗದಗ ಜಿಲ್ಲೆಯ ಅಲೋಪತಿ ವೈದ್ಯರುಗಳ ಎಲ್ಲ ಆಸ್ಪತ್ರೆಗಳು ಬಂದ್ ಮಾಡಿ ಎಮರ್ಜೆನ್ಸಿ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಬಿಟ್ಟರೆ ಉಳಿದೆಲ್ಲ ವೈದ್ಯಕೀಯ ಸೇವೆಗಳು ರವಿವಾರ ಬೆಳಗಿನ 6 ಗಂಟೆಯವರೆಗೆ 24 ಗಂಟೆಗೆ ಸ್ಥಗಿತಗೊಂಡಿದ್ದವು.
ವೈದ್ಯರ ಪ್ರತಿಭಟನೆಗೆ ಗದಗ-ಬೆಟಗೇರಿ ರೋಟರಿ ಕ್ಲಬ್, ಗದಗ-ಬೆಟಗೇರಿ ಲಯನ್ಸ್ ಕ್ಲಬ್, ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ಹಾಗೂ ಮಿಡ್‌ಡೌನ್ ಕ್ಲಬ್, ಅಕ್ಕನ ಬಳಗ, ಸಿಎಸ್‌ಐ ನರ್ಸಿಂಗ್ ಕಾಲೇಜ್, ಹಂಚಿನಾಳ ನರ್ಸಿಂಗ್ ಕಾಲೇಜ್, ಸಂಕನೂರ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳು, ಫಾರ್ಮಾ ಕಂಪನಿಗಳ ವೈದ್ಯಕೀಯ ಪ್ರತಿನಿಧಿಗಳು ಸೇರಿದಂತೆ ಹಲವಾರು ಸಾಮಾಜಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು ಪಾಲ್ಗೊಂಡು ಬೆಂಬಲ ಸೂಚಿಸಿದರು.
Advertisement