ಪೊಲೀಸರ ಲಾಠಿ ಚಾರ್ಜ್ ಖಂಡಿಸಿ ಪಂಚಮಸಾಲಿ ಸಮಾಜದಿಂದ ಬೃಹತ್ ಪ್ರತಿಭಟನೆ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದ ಜನರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದನ್ನು ಖಂಡಿಸಿ ಸ್ಥಳೀಯ ಪಂಚಮಸಾಲಿ ಸಮಾಜದವರು ಬಸ್ ನಿಲ್ದಾಣದ ಹತ್ತಿರ ಪ್ರತಿಭಟನೆ ನಡೆಸಿದರು.

Advertisement

ಬೆಳಗಾವಿಯಲ್ಲಿ ನಡೆದ ಪ್ರತಿಭಟನಾ ಸಮಯದಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡಿದ್ದು ಖಂಡನೀಯ. ಇದಕ್ಕೆ ಕಾರಣರಾದವರನ್ನು ತಕ್ಷಣವೇ ಸರಕಾರ ಅಮಾನತು ಮಾಡಬೇಕೆಂದು ಅಶೋಕ ಬೇವಿನಕಟ್ಟಿ ಆಗ್ರಹಿಸಿದರು. ಅಲ್ಲದೆ ಪ್ರತಿಭಟನೆ ಸಮಯದಲ್ಲಿ ಪ್ರತಿಭಟನಕಾರರ ಮೇಲೆ ವಿನಾಕಾರಣ ದಾಖಲಿಸಿರುವ ಪ್ರಕರಣಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದರು. ಸಂವಿಧಾನಬದ್ಧ ಪ್ರತಿಭಟನೆ ಹಕ್ಕನ್ನು ಹತ್ತಿಕ್ಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ನ್ಯಾಯಯುತ ಬೇಡಿಕೆ ಈಡೇರಿಸುವುದು ಸರ್ಕಾರದ ಕರ್ತವ್ಯ. ಆದರೆ, ಸರ್ಕಾರ ದೌರ್ಜನ್ಯ ಎಸಗಿರುವುದು ಖಂಡನೀಯ. ಮುಖ್ಯಮಂತ್ರಿ ಮತ್ತು ಅವರ ಸಂಪುಟದ ಸಹೋದ್ಯೋಗಿಗಳು ಪಂಚಮಸಾಲಿ ಸಮಾಜಕ್ಕೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಬಸವರಾಜ ಕೊಟಗಿ ಮಾತನಾಡಿ, ಬೆಳಗಾವಿ ಘಟನೆಯಿಂದ ಇಡೀ ಸಮಾಜಕ್ಕೆ ಅಪಾರ ನೋವಾಗಿದೆ. ಪಂಚಮಸಾಲಿ ಸಮಾಜ ಬಾಂಧವರು ಸಾತ್ವಿಕರು. ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಹೋರಾಟ ನಡೆಸಿಲ್ಲ. ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಒತ್ತಾಯ ಮಾಡಲು ಬಂದವರ ಮೇಲೆ ಲಾಠಿಚಾರ್ಜ್ ನಡೆಸಿರುವುದು ಖಂಡನೀಯ ಎಂದರು.

ಶಶಿಧರ ಸಂಕನಗೌಡ್ರ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ ೨ಎ ಮಿಸಲಾತಿ ಬೇಡಿಕೆ ಇಟ್ಟಿದ್ದು ಇಂದು ನಿನ್ನೆಯದಲ್ಲ.  ಹಿಂದಿನ ಯಾವುದೇ ಸರ್ಕಾರ ನಮ್ಮ ಸಮಾಜದ ಮೇಲೆ ದೌರ್ಜನ್ಯ, ಲಾಠಿಚಾರ್ಜ ಮಾಡಿಲ್ಲ. ನಮ್ಮ ಹಕ್ಕು ಕೇಳಿದ್ದಕ್ಕೆ ಬೆಳಗಾವಿಯಲ್ಲಿ ಲಾಠಿಚಾರ್ಜ್ ನಡೆಸಿ ಸಮಾಜದವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದು ಖಂಡನೀಯ ಎಂದರು.

ಪ್ರತಿಭಟನೆಯಲ್ಲಿ ಗಂಗಾಧರ ಕೊಟಗಿ, ಮಲ್ಲಿಕಾರ್ಜುನ ಭೂಮನಗೌಡ್ರ, ಮುದಿಯಪ್ಪ ಮುಗಳಿ, ಶ್ರೀಶೈಲಪ್ಪ ಬಂಡಿಹಾಳ, ಚನ್ನಬಸಪ್ಪ ಕುಷ್ಟಗಿ, ಮುತ್ತಣ್ಣ ಪಲ್ಲೇದ, ಚನ್ನಪ್ಪ ಮ್ಯಾಗೇರಿ, ವಿರಣ್ಣ ಧರಣೆಪ್ಪಗೌಡ್ರ, ಕಲ್ಮೇಶ ತೊಂಡಿಹಾಳ, ಆನಂದ ಕೊಟಗಿ, ಸಂಗಪ್ಪ ಕಾಮನಕೆರಿ, ಪ್ರಭುಗೌಡ ನಾಡಗೌಡ, ಮಂಜುನಾಥ ಪಾಯಪ್ಪಗೌಡ್ರ, ಮಾಲಿಂಗಪ್ಪ ಮ್ಯಾಗೆರಿ, ರುದ್ರೇಶ ಕೊಟಗಿ, ವೀರಪ್ಪ ಜಿರ್ಲ, ನಿಂಗಪ್ಪ ಕಣವಿ, ಪರಪ್ಪ ದಿಂಡೂರ, ಉಮೇಶ ಸಂಕನಗೌಡ್ರ, ಸಿದ್ದಣ್ಣ ನರಗುಂದ, ಬಸವರಾಜ ಕಲಾಲಬಂಡಿ, ಶ್ರೀಕಾಂತ ಬೆಡಗಲ್, ಶರಣಪ್ಪ ಬೆಟಗೇರಿ, ಮಂಜುನಾಥ ಕಮಲಾಪೂರ, ಸತೀಶ ಮಾಳವಾಡ, ಅರವಿಂದ ಕಡೆತೋಟದ, ಅಶೋಕ ಕಲ್ಲೂರ, ಬಸಪ್ಪ ಹಕಾರಿ ಸೇರಿದಂತೆ ಪಂಚಮಸಾಲಿ ಸಮಾಜದವರಿದ್ದರು.

ಉಪತಹಸೀಲ್ದಾರರ ಮೇಲೆ ಕ್ರಮಕ್ಕೆ ಆಗ್ರಹ

ಪ್ರತಿಭಟನಾಕಾರರು ಮನವಿ ಸಲ್ಲಿಸಲು ಅದೆಷ್ಟೇ ಕಾಯ್ದರೂ ಬೇಗನೆ ಬಾರದ ಉಪತಹಸೀಲ್ದಾರರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಪ್ರತಿಭಟನಾಕಾರರು ಡಿ.ಸಿ.ಯವರಿಗೆ ಮನವಿ ಅರ್ಪಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ನರೇಗಲ್ಲ ಉಪತಹಸೀಲ್ದಾರ ಎಸ್.ಜಿ. ದೊಡ್ಡಮನಿ, ನಾನು ಉದ್ದೇಶಪೂರ್ವಕವಾಗಿ ತಡಮಾಡಿ ಬಂದಿಲ್ಲ. ಜರೂರಿನ ಕಾರ್ಯ ನಿಮಿತ್ತ ನಾನು ಜಿಲ್ಲಾ ಕಚೇರಿಗೆ ತೆರಳಿದ್ದರಿಂದ ಬರಲು ತಡವಾಯಿತು. ಅದಕ್ಕಾಗಿ ಎಲ್ಲರಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದರು.


Spread the love

LEAVE A REPLY

Please enter your comment!
Please enter your name here