ವಿಜಯಸಾಕ್ಷಿ ಸುದ್ದಿ, ಗದಗ: ಬಿಜೆಪಿಯು ಜಾರಿಗೆ ತಂದ ಅಪಾಯಕಾರಿ ಕೃಷಿ ಕಾಯ್ದೆಗಳನ್ನು ರದ್ದು ಮಾಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇಲ್ಲಿಯವರೆಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಜ. 28ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಸತ್ಯಾಗ್ರಹ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶಂಕರಗೌಡ ಜಯನಗೌಡರ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಉತ್ಪನ್ನಗಳಿಗೆ ಯೋಗ್ಯ ಬೆಲೆ ಕೊಡುತ್ತೇವೆಂದು ಹೇಳಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಮಾತಿಗೆ ತಪ್ಪಿದ್ದಾರೆ. ಇವರನ್ನು ಎಚ್ಚರಿಸಲು ವಿಧಾನಸಭೆಯ ಅಧಿವೇಶನ ನಡೆಯುವ ಸಂದರ್ಭದಲ್ಲಿ ಸತ್ಯಾಗ್ರಹ ನಡೆಸಲಾಗುವುದು ಎಂದರು.
ಜಿಲ್ಲೆಯ ಕಪ್ಪತ್ತಗುಡ್ಡದ ಅಂಚಿನಲ್ಲಿರುವ ಅರಣ್ಯ ಒತ್ತುವರಿದಾರ ರೈತರಿಗೆ ಸರ್ಕಾರದಿಂದ ಪಟ್ಟಾ ದೊರಕಿಸಿಕೊಡಬೇಕು, ರೈತರ ಹೊಲಗಳಲ್ಲಿ ಹಾವು, ಚೇಳು ಕಡಿದು, ಟ್ರ್ಯಾಕ್ಟರ್ಗಳಿಂದ ಬಿದ್ದು ಸಾವನ್ನಪ್ಪಿರುತ್ತಾರೆ. ಆದ್ದರಿಂದ, ಕಟ್ಟಡ ಕೂಲಿ ಕಾರ್ಮಿಕರಂತೆ ಮಂಡಳಿಯಿಂದ ಬರುವ ಸೌಲಭ್ಯಗಳನ್ನು ಕೃಷಿ ಕೂಲಿ ಕಾರ್ಮಿಕರಿಗೆ ಸರ್ಕಾರದಿಂದ ಸಹಾಯಧನವನ್ನು ಒದಗಿಸಿಕೊಡಬೇಕು ಹಾಗೂ ಜಿಲ್ಲೆಯ ಹುಲಿಗುಡ್ಡದ ಏತ ನೀರಾವರಿ ಅಪೂರ್ಣವಾಗಿದ್ದು, ಇಡೀ ಗದಗ ಜಿಲ್ಲೆಯಾದ್ಯಂತ ರೈತರಿಗೆ ಸರಿಯಾಗಿ ನೀರು ಸಿಗುತ್ತಿಲ್ಲ. ಆದ್ದರಿಂದ ಪ್ರತಿ ರೈತರ ಹೊಲಗಳಿಗೆ ಚಿಟಕಾಲುವೆ ಮತ್ತು ಪೈಪ್ಲೈನ್ ಮುಖಾಂತರ ಸಂಪೂರ್ಣ ನೀರಾವರಿ ಒದಗಿಸಿಕೊಡಬೇಕು, ಜಿಲ್ಲೆಯ ಜಾಲವಾಡಗಿ ಏತ ನೀರಾವರಿ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಬರುವ ಬಜೆಟ್ನಲ್ಲಿ ಸರ್ಕಾರದಿಂದ ಹಣ ನಿಗದಿ ಮಾಡಬೇಕು ಇತ್ಯಾದಿ ಇನ್ನೂ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ನವಲಗುಂದ, ದೃವಕುಮಾರ ಹೂಗಾರ, ಮಂಜುನಾಥ ವಡ್ಡರ, ವೀರೇಶ ಮಾಂಡ್ರೆ, ಶಾಂತಪ್ಪ ಹೊಳ್ಳೆಣ್ಣವರ, ಎಂ.ಪಿ. ಶಾಲಾವಾಡಿ, ಮಂಜುನಗೌಡ ರಾಮನಗೌಡ್ರು, ಗಿರೀಶ ಹೊಸಮನಿ ಇತರರು ಇದ್ದರು.
ಭೂಸುಧಾರಣೆ ಕಾಯ್ದೆ 2020 ಹಾಗೂ ಭೂಸ್ವಾಧೀನ ಕಾಯ್ದೆ 2013ಕ್ಕೆ ತಂದಿರುವ ತಿದ್ದುಪಡಿ ರದ್ದು ಮಾಡಬೇಕು, ಎಂಎಸ್ಪಿ ಕನಿಷ್ಠ ಬೆಂಬಲ ಬೆಲೆ ನಿಗದಿ, ಕೃಷಿ ಮಾರುಕಟ್ಟೆಯಲ್ಲಿ ಖರೀದಿ ಕೇಂದ್ರವನ್ನು ತೆರೆದಿರಲು ಬೇಕಾದ ಸಂಪನ್ಮೂಲ ಕನಿಷ್ಠ 10 ಸಾವಿರ ಕೋಟಿ ಅರವತ ನಿಧಿ ಮೀಸಲಿಡಬೇಕು, ಭೂಸ್ವಾಧೀನ ಕಾಯ್ದೆ 2013ಕ್ಕೆ ವಿರುದ್ಧವಾಗಿ ರೈತರ ಭೂಮಿಯನ್ನು ಬಲವಂತದಿಂದ ಕಿತ್ತುಕೊಳ್ಳುವುದನ್ನು ಕೂಡಲೇ ಕೈಬಿಡಬೇಕು ಇತ್ಯಾದಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಶಂಕರಗೌಡ ಜಯನಗೌಡರ ಹೇಳಿದರು.



