ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಇಲ್ಲಿನ ಸ್ಕೂಲ್ ಚಂದನದಲ್ಲಿ ಸೋಮವಾರ ಭಾರತದ ಶ್ರೇಷ್ಠ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯೋಪಾಧ್ಯಾಯ ಆರ್.ಜಿ. ಭಾವನವರ, ಗಣಿತ ಸಿದ್ಧಾಂತಗಳು, ವಿಶ್ಲೇಷಣೆಗಳನ್ನು ಅರಿಯುವುದು ಸುಲಭ. ಅದರ ಜೊತೆಗೆ ದೈನಂದಿನ ಜೀವನಕ್ಕೆ ಗಣಿತದ ಮೂಲ ಕ್ರಿಯೆಗಳು ಆಧಾರವಾಗಿದೆ. ಗಣಿತದ ಆಳ-ಅಗಲಗಳನ್ನು ಅಳೆದು ತೂಗುವುದಕ್ಕೆ ಗಣಿತ ಶಾಸ್ತ್ರಜ್ಞರಿಂದ ಮಾತ್ರ ಸಾಧ್ಯ. ಗಣಿತ ಶಾಸ್ತ್ರಕ್ಕೆ ಭಾರತೀಯರ ಕೊಡುಗೆ ಅಪಾರವಾಗಿದ್ದು, ಸೊನ್ನೆಯನ್ನು ಕಂಡುಹಿಡಿದ ಭಾರತೀಯರಿಂದಾಗಿ ಸಂಖ್ಯಾಶಾಸ್ತ್ರ ಇಷ್ಟು ವಿಸ್ತಾರವಾಗಿ ಬೆಳೆಯಲು ಮತ್ತು ಅದರ ಆಳಕ್ಕೆ ಇಳಿಯಲು ಸಾಧ್ಯವಾಗುತ್ತಿದೆ. ಗಣಿತ ಕಬ್ಬಿಣದ ಕಡಲೆಯಲ್ಲ, ಹೆಚ್ಚು ಸುಲಭವಾದ ವಿಷಯವಾಗಿದ್ದು, ಮಕ್ಕಳು ಆಸಕ್ತಿಯಿಂದ ಕಲಿಯಬಹುದಾಗಿದೆ ಎಂದು ಹೇಳಿದರು.
ಗಣಿತ ಶಿಕ್ಷಕಿಯರಾದ ಸಿಮರಿನ್ ಹಾಗೂ ಹೊನ್ನಮ್ಮ ಅವರು ಗಣಿತ ವಿಷಯವನ್ನು ಮನದಟ್ಟು ಮಾಡುವುದರೊಂದಿಗೆ ರಾಷ್ಟ್ರೀಯ ಗಣಿತ ದಿನದ ಮಹತ್ವ ಮತ್ತು ಆಚರಣೆಯ ವಿಶೇಷತೆಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಶಿಕ್ಷಕವೃಂದ, ವಿದ್ಯಾರ್ಥಿಗಳು ಹಾಜರಿದ್ದರು.



