ವಿಜಯಸಾಕ್ಷಿ ಸುದ್ದಿ, ಗದಗ : ಇಂದಿನ ಆಧುನಿಕತೆಯ ಭರಾಟೆಯಲ್ಲಿ ಮನುಷತ್ವ ಮತ್ತು ಮಾನವೀಯ ಸಂಬಂಧಗಳು ಕಡಿಮೆಯಾಗುತ್ತಿವೆ. ಮಾಂತ್ರಿಕವಾಗಬೇಕಿದ್ದ ಸಂಬಂಧಗಳು ಯಾಂತ್ರಿಕವಾಗಿ ನಾವಿಂದು ಯಂತ್ರ ಮಾನವರಾಗುತ್ತಿರುವದು ದುರಂತದ ಸಂಗತಿ ಎಂದು ಖ್ಯಾತ ಚಲನಚಿತ್ರ ನಿರ್ದೆಶಕ ಡಾ. ಟಿ.ಎಸ್. ನಾಗಾಭರಣ ವಿಷಾದ ವ್ಯಕ್ತಪಡಿಸಿದರು.
ಅವರು ಗದುಗಿನ ಬಸವೇಶ್ವರ ಕಲಾ, ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶ್ರೀ ಮಾತೃಶ್ರೀ ಸೇವಾ ಟ್ರಸ್ಟ್ ಗದಗ ಹಾಗೂ ಗದಗ ಜಿಲ್ಲಾ ಪೊಲೀಸ್ ಇಲಾಖೆಯ ರಾಣಿ ಚೆನ್ನಮ್ಮ ಪಡೆಯ ಸಹಯೋಗದಲ್ಲಿ ರೋಣದ ಲಿಂ. ಮಾತೋಶ್ರೀ ಬಸಮ್ಮ ತಾಯಿ ಸಂಗನಗೌಡ ಪಾಟೀಲ ಪುಣ್ಯ ಸ್ಮರಣೋತ್ಸವ ಮತ್ತು ಗುಳೇದಗುಡ್ಡದ ಲಿಂ. ಮಾತೋಶ್ರೀ ಲಕ್ಷ್ಮಮ್ಮ ತಾಯಿ ಮ.ಗೌಡರ ಇವರ ಪ್ರಥಮ ಪುಣ್ಯಸ್ಮರಣೋತ್ಸವದ ಅಂಗವಾಗಿ ‘ಮಾತೃಶ್ರೀ ಸ್ಮರಣೋತ್ಸವ’ ಹಾಗೂ ಮಹಿಳೆಯರ ಆತ್ಮಸಂರಕ್ಷಣೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಸೌಲಭ್ಯಗಳು ಒಂದೆಡೆ ಮನುಷ್ಯರನ್ನು, ಮನುಷ್ಯತ್ವವನ್ನು ದೂರ ಮಾಡುತ್ತಿವೆ ಎಂದೆನ್ನಿಸುವದು. ನಾವು ದೂರದ ಚಂದ್ರನನ್ನು ತಲುಪಿದ್ದೇವೆ. ಆದರೆ ಪಕ್ಕದಲ್ಲಿರುವ ಮನುಷ್ಯನನ್ನು ಕಡೆಗಣಿಸಿ ಮೊಬೈಲ್ ತಿಕ್ಕುತ್ತಿದ್ದೇವೆ. ಪಕ್ಕದಲ್ಲಿದ್ದವರೊಂದಿಗೆ ಸಂವಹನ ಇಲ್ಲದಂತಾಗಿದೆ. ಕೌಟುಂಬಿಕ ಸಂಬಂಧಗಳು ಕಡಿತಗೊಳ್ಳುತ್ತಿವೆ. ಅವಿಭಕ್ತ ಕುಟುಂಬಗಳ ಕೊಂಡಿಗಳು ಕಳಚಿಕೊಂಡು ಇತಿಮಿತಿಗೊಳ್ಳುತ್ತಿವೆ. ಒಂದಾಗಿರುವ, ಚೆಂದಾಗಿರುವ ಗಟ್ಟಿತನದ ಬದುಕು ಟೊಳ್ಳು ಆಗುತ್ತಿರುವದು ವಿಷಾದನೀಯ ಎಂದರು.
ನಾವು ನಿನ್ನೆಗಳ ಬಗ್ಗೆ ಯೋಚನೆ ಮಾಡಿದಿದ್ದರೆ ನಾಳೆಯ ಬಗ್ಗೆ ಭವಿಷ್ಯ ಕಟ್ಟಲು ಆಗದು. ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕವಾದಂತ ಅದ್ಭುತವಾದ ಭವಿಷ್ಯವನ್ನು ಕಟ್ಟುವ ಮಕ್ಕಳನ್ನು ನಾವು ಅವಿಭಕ್ತ ಕುಟುಂಬದಲ್ಲಿ ಕಂಡಿದ್ದೇವೆ. ರೋಣದ ಬಸಮ್ಮತಾಯಿ ಪಾಟೀಲರು ರಾಜಮಾತೆಯಾಗಿದ್ದರು ಎಂಬುದು ಅವರ ಬದುಕಿನಿಂದ ತಿಳಿದು ಬರುವದು. ರಾಜ್ಯವನ್ನಾಳುವ ಮಕ್ಕಳನ್ನು ನಾಡಿಗೆ ನೀಡಿದ ಬಸಮ್ಮ ಅಕ್ಷರಶಃ ರಾಜಮಾತೆ ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ರೋಣ ಶಾಸಕರೂ ಹಾಗೂ ಕರ್ನಾಟಕ ರಾಜ್ಯ ಖನೀಜ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಜಿ.ಎಸ್.ಪಾಟೀಲ ಮಾತನಾಡಿ ತಾಯಿ ಬಸಮ್ಮ ತಂದೆ ಸಂಗನಗೌಡ ಪಾಟೀಲರು ನೀಡಿದ ಸಂಸ್ಕಾರ, ಸಂಸ್ಕೃತಿ, ಶಿಕ್ಷಣದಿಂದಾಗಿ ನಮ್ಮ ಕುಟುಂಬ ಅವಿಭಕ್ತ ಕುಟುಂಬವಾಗಿ ಬೆಳೆದು ಬಂತು ಇಂದಿಗೂ ನಾವೆಲ್ಲ ಸಹೋದರರು, ಕುಟುಂಬದವರು ಒಂದಾಗಿ ಚೆಂದಾಗಿ ಇರುವುದಕ್ಕೆ ಹಿರಿಯರು ಹಾಕಿಕೊಟ್ಟ ಸನ್ಮಾರ್ಗವೇ ಕಾರಣ ಎಂದರು.
ಸಾನ್ನಿಧ್ಯ ವಹಿಸಿದ್ದ ಜ.ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ, ಸರ್ವ ಕಾಲಕ್ಕೂ ಮಹಿಳೆ ಪೂಜ್ಯನೀಯಳು. ಕುಟುಂಬ, ಸಮಾಜ ದೇಶವನ್ನು ಪ್ರಗತಿಯಲ್ಲಿ ಮುನ್ನಡೆಸುವ ಸಾಮರ್ಥ್ಯ ತಾಯಂದಿರರಲ್ಲಿದೆ.
ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು ಎಂಬುದನ್ನು ಸಾಬೀತುಗೊಳಿಸಿದ್ದಾರೆ. ಕುಟುಂಬಗಳು ಒಂದಾಗಿ ಚೆಂದಾಗಿ ಇರಬೇಕೆಂದರೆ ಎಲ್ಲ ಮಹಿಳೆಯರಲ್ಲಿ ತಾಯಿ ಗುಣ ಬರಬೇಕು, ಅಂತಹ ಗುಣ ಬಸಮ್ಮನವರಲ್ಲಿ ಹಾಗೂ ಲಕ್ಷ್ಮಮ್ಮನವರಲ್ಲಿತ್ತು ಎಂದರು.
ಪ್ರಾಚಾರ್ಯ ಡಾ. ರಮೇಶ ಕಲ್ಲನಗೌಡರ ಆಶಯ ನುಡಿಗಳನ್ನಾಡಿದರು. ಮುಖ್ಯ ಅತಿಥಿ ಅಖಿಲ ಭಾರತ ವೀರಶೈವ ಮಹಾಸಭಾ ಗದಗ ಜಿಲ್ಲಾಧ್ಯಕ್ಷ ಶರಣಬಸಪ್ಪ ಗುಡಿಮನಿ ಮಾತನಾಡಿದರು. ವೇದಿಕೆಯ ಮೇಲೆ ಬಿ.ಎಸ್. ಪಾಟೀಲ, ರಘು ಪುರುಷೋತ್ತಮ, ವಿದ್ಯಾಧರ ದೊಡ್ಡಮನಿ, ಸಿದ್ಧಲಿಂಗಪ್ಪ ಚಳಗೇರಿ, ಸುರೇಶ ಅಂಗಡಿ ಉಪಸ್ಥಿತರಿದ್ದರು.
ಪಿ.ಪಿ.ಜಿ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಟ್ರಸ್ಟ್ ಅಧ್ಯಕ್ಷ ಎಸ್.ಎಂ. ಗೌಡರ ಸ್ವಾಗತಿಸಿದರು, ಆರ್.ಜಿ. ಚಿಕ್ಕಮಠ ಪರಿಚಯಿಸಿದರು. ಆನಂದಯ್ಯ ವಿರಕ್ತಮಠ ನಿರೂಪಿಸಿದರೆ, ಕೊನೆಗೆ ಅಪ್ಪಣ್ಣ ಗೌಡರ ವಂದಿಸಿದರು. ಸಮಾರಂಭದಲ್ಲಿ ನಗರದ ಬಿಎಡ್ ಕಾಲೇಜುಗಳ ಪ್ರಶಿಕ್ಷಣಾರ್ಥಿಗಳು, ಗಣ್ಯರು ಪಾಲ್ಗೊಂಡಿದ್ದರು.
ಹಳೆಯದನ್ನು ನಿರಂತರವಾಗಿ ಮರೆಯುವ, ಅಗೌರವಿಸುದನ್ನು ನಿಲ್ಲಿಸದಿದ್ದರೆ ದುರಂತವಾದೀತು. ನಮ್ಮತನ ಇರುವ ಸಮಾಜವನ್ನು ಕಟ್ಟಬೇಕು. ನಾವು ನಮ್ಮ ನಡಾವಳಿಯನ್ನು ತಿದ್ದಿಕೊಳ್ಳದಿದ್ದರೆ ನಮ್ಮ ಬದುಕು ಅನ್ಯಮಾರ್ಗಕ್ಕೆ ಸಾಗುವದು ಎಂದರಲ್ಲದೆ, ಗದುಗಿನ ಬಗ್ಗೆ ನನಗೆ ವಿಶೇಷ ಪ್ರೀತಿ, ಗೌರವವಿದೆ. ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಧಾರ್ಮಿಕತೆಗೆ ತನ್ನದೇ ಆದ ಬಹು ದೊಡ್ಡ ಕೊಡುಗೆ ನೀಡಿದೆ. ಅದು ಗದುಗಿನ ಶ್ರೇಷ್ಠತೆಯ ಕೂಡ. ಕನ್ನಡ ಭಾಷೆ, ಕನ್ನಡಿಗರು ಮನುಷ್ಯತ್ವವನ್ನು ನಿರಂತರವಾಗಿ ಹೇಳಿಕೊಂಡು ಬಂದವರು, ಪಾಲಿಸಿಕೊಂಡು ಬಂದವರು ಈ ಪರಂಪರೆ ಮುಂದುವರೆಯಬೇಕೆಂದು ನಾಗಾಭರಣ ಅಭಿಪ್ರಾಯಪಟ್ಟರು.
Advertisement