ವಿಜಯಸಾಕ್ಷಿ ಸುದ್ದಿ, ಗದಗ: ಅವರಾತ್ರಿ, ಶಿವರಾತ್ರಿ, ನವರಾತ್ರಿಯ ವಿಶೇಷ ಬೆಳಕೇ ಶ್ರೀದೇವಿಯ ದಿವ್ಯಶಕ್ತಿ ಎಂದು ಶ್ರೀಮಠದ ಧರ್ಮದರ್ಶಿಗಳಾದ ಮಹೇಶ್ವರಸ್ವಾಮೀಜಿ ಹೇಳಿದರು.
ನಗರದ ಮುಳಗುಂದನಾಕಾ ಬಳಿಯ ಶ್ರೀ ಅಡವೀಂದ್ರಸ್ವಾಮಿ ಮಠದಲ್ಲಿ 45ನೇ ವರ್ಷದ ದಸರಾ ಮಹೋತ್ಸವ ಮತ್ತು ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ರಾಮಕೃಷ್ಣ ಪರಮಹಂಸರು ಶ್ರೀದುರ್ಗಾ ಮಾತೆಯನ್ನು ಆರಾಧಿಸಿ ದೇವಿಯೇ ತಾವಾಗಿದ್ದರು. ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರಿಗೆ ಅವರು ಶ್ರೀದೇವಿಯ ಬಗ್ಗೆ ಅರಿವನ್ನು ಮೂಡಿಸಿದರು. ಶ್ರೀದೇವಿಯ ದುಷ್ಟರ ಸಂಹಾರ, ಶಿಷ್ಟರ ರಕ್ಷಣೆಯೇ ನವರಾತ್ರಿ ಆಚರಣೆಯಾಗಿದೆ ಎಂದರು ಹೇಳಿದರು.
ಮಹಿಳೆಯರು ನವರಾತ್ರಿಯ ಸಂದರ್ಭಗಳಲ್ಲಿ ಶ್ರೀದೇವಿ ಆರಾಧನೆ ಮಾಡುತ್ತಾರೆ. ಇಂದಿನ ಆಧುನಿಕ ದಿನಮಾನಗಳಲ್ಲಿ ಯುವ ಜನರಲ್ಲಿ ಧಾರ್ಮಿಕ ಮನೋಭಾವನೆ ಹೆಚ್ಚಿಸುವ ಕೆಲಸವಾಗಬೇಕಿದೆ. ಸಮಾಜದಲ್ಲಿ ಧರ್ಮ ಜಾಗೃತಿ ಮೂಡಿಸಲು ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಶ್ರೀಮಠದಲ್ಲಿ ಜರುಗುವ ಶ್ರೀದೇವಿ ಪುರಾಣ ಪ್ರವಚನ ಆಲಿಸಿ, ಜೀವನ ಪಾವನ ಮಾಡಿಕೊಳ್ಳಬೇಕು ಎಂದು ಮಹೇಶ್ವರ ಸ್ವಾಮೀಜಿ ಹೇಳಿದರು.
ಶ್ರೀಅನ್ನಪೂರ್ಣೇಶ್ವರ ಸನ್ನಿಧಿಯಲ್ಲಿ ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಅವರಿಂದ ಪುರಾಣ ಪ್ರವಚನ ನಡೆಯಿತು. ಚನ್ನಬಸಯ್ಯ ಶಾಸ್ತ್ರಿಗಳು ಹೇಮಗಿರಿಮಠ ಪುರಾಣ ಪಠಿಸಿದರು. ಪಕ್ರುಸಾಬ ಮುಲ್ಲಾ, ಜಗನ್ನಾಥ ಕಲಬುರಗಿ, ಶರಣಕುಮಾರ ಗುತ್ತರಗಿ, ಎಸ್.ಬಿ. ಭಜಂತ್ರಿ ಸಂಗೀತ ಸೇವೆ ನೀಡಿದರು.
ಪೂಜಾ ಸಮಿತಿ ಅಧ್ಯಕ್ಷರಾದ ಶರಣಯ್ಯಸ್ವಾಮಿ ಶಿವಪ್ಪಯ್ಯನಮಠ, ವೀರೇಶ್ವರ ಸ್ವಾಮಿಗಳು ಹೊಸಳ್ಳಿಮಠ, ಜಾತ್ರಾ ಮಹೋತ್ಸವ ಸಮಿತಿ ಕಾರ್ಯದರ್ಶಿ ಗೀತಾ ಎಂ. ಹೂಗಾರ, ಸಹಕಾರ್ಯದರ್ಶಿ ಸುಷ್ಮಾ ಖಂಡಪ್ಪಗೌಡ್ರ, ಕೋಶಾಧ್ಯಕ್ಷರಾದ ಅಶ್ವಿನಿ ನೀಲಗುಂದ, ವಿ.ಎಚ್. ದೇಸಾಯಿಗೌಡ್ರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿವಿಧ ಭಕ್ತಿಸೇವೆ ವಹಿಸಿದ್ದ ಗಣ್ಯರನ್ನು ಸನ್ಮಾನಿಸಲಾಯಿತು. ಶ್ರೀ ಅನ್ನಪೂರ್ಣೇಶ್ವರಿದೇವಿ ಜಾತ್ರಾ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶರಣಬಸಪ್ಪ ಗುಡಿಮನಿ ಸ್ವಾಗತಿಸಿದರು. ವಿ.ಎಂ. ಕುಂದ್ರಾಳಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಅಪ್ಪುರಾಜ ಭದ್ರಕಾಳಿಮಠ ವಂದಿಸಿದರು.
ದತ್ತಾ ಪ್ರಾಪರ್ಟಿಸ್ ವ್ಯವಸ್ಥಾಪಕ ನಿರ್ದೇಶಕ ನಾರಾಯಣ ಕುಡತರಕರ, ಶ್ರೀ ಅನ್ನಪೂರ್ಣೇಶ್ವರಿದೇವಿ ಜಾತ್ರಾ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಎಸ್.ಪಿ. ಸಂಶಿಮಠ, ಅಧ್ಯಕ್ಷ ಸದಾಶಿವಯ್ಯ ಮದರಿಮಠ, ಮಹಿಳಾ ಸಮಿತಿ ಅಧ್ಯಕ್ಷರಾದ ಸುವರ್ಣಾ ಮದರಿಮಠ ಮುಂತಾದ ಗಣ್ಯರು ವೇದಿಕೆಯಲ್ಲಿದ್ದರು.