ಸಂಸ್ಕಾರ, ಸಚ್ಚಾರಿತ್ರ್ಯದಿಂದ ಬದುಕು ಶ್ರೀಮಂತವಾಗಲಿ: ರಂಭಾಪುರಿ ಶ್ರೀ

0
???????
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಬಾಳಿನ ಭಾಗ್ಯೋದಯಕ್ಕೆ ಆದರ್ಶ ಮೌಲ್ಯಗಳ ಪರಿಪಾಲನೆ ಬೇಕು. ಮನುಷ್ಯನ ಮನಸ್ಸು ಮಲಿನಗೊಂಡ ಬಟ್ಟೆಯಂತಾಗಿದೆ. ಸುಂದರವಾದ ಉಡುಗೆ-ತೊಡುಗೆಗಳಿಂದ ವ್ಯಕ್ತಿತ್ವ ಬದಲಿಸಿಕೊಳ್ಳಬಹುದೇ ಹೊರತು ಬದುಕು ಬದಲಿಸಲು ಸಾಧ್ಯವಿಲ್ಲ. ಸಂಸ್ಕಾರ ಮತ್ತು ಸಚ್ಚಾರಿತ್ರ್ಯದಿಂದ ಬದುಕು ಶ್ರೀಮಂತಗೊಳ್ಳಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ಸೋಮವಾರ ಸಮೀಪದ ಅಬ್ಬಿಗೇರಿ ಹಿರೇಮಠದ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಭವನದಲ್ಲಿ ಜರುಗಿದ ಲಿಂ. ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮಿಗಳವರ 5ನೇ ವರ್ಷದ ಪುಣ್ಯ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಬದುಕಿನ ವಿಕಾಸಕ್ಕೆ ಧರ್ಮವೇ ಅಡಿಪಾಯ. ಶಾಂತಿ, ನೆಮ್ಮದಿಯ ಬದುಕಿಗೆ ಧರ್ಮದ ಪರಿಪಾಲನೆ ಮುಖ್ಯ. ಧರ್ಮ, ಸಂಸ್ಕೃತಿ, ಸಭ್ಯತೆ, ಸದ್ಗುಣ ಮತ್ತು ಸಂಸ್ಕಾರ ಜನರ ನಿಜವಾದ ಆಸ್ತಿ. ಹೊರಗಿನ ಸಿರಿ ಸಂಪತ್ತು ಹೆಚ್ಚಾಗುತ್ತಿದ್ದರೂ ಆಂತರಿಕ ಬದುಕು ದುರ್ಬಲಗೊಳ್ಳುತ್ತಿರುವುದು ನೋವಿನ ಸಂಗತಿ. ಸಕಲರ ಬಾಳಿನಲ್ಲಿ ಬಲವನ್ನು ತುಂಬಿ ತರುವುದೇ ಗುರುವಿನ ಪರಮ ಗುರಿಯಾಗಿದೆ ಎಂದರು.

ಅಬ್ಬಿಗೇರಿ ಹಿರೇಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಲಿಂ. ಶ್ರೀ ಸೋಮಶೇಖರ ಶಿವಾಚಾರ್ಯರು ಕೈಕೊಂಡ ಸತ್ಯಸಂಕಲ್ಪಗಳು ಶ್ರೀಮಠದ ಆವರಣದಲ್ಲಿ ಸಾಕಾರಗೊಳ್ಳುತ್ತಿರುವುದು ಭಕ್ತ ಸಂಕುಲಕ್ಕೆ ಸಂತೃಪ್ತಿ ತಂದಿವೆ ಎಂದರು.

ಮುಕ್ತಿಮಂದಿರ ಕ್ಷೇತ್ರದ ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯರು, ನರೇಗಲ್ಲ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ಅಬ್ಬಿಗೇರಿ ಡಾ. ಬಸವರಾಜ ಶರಣರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಅಬ್ಬಿಗೇರಿ ಗ್ರಾ.ಪಂ ಅಧ್ಯಕ್ಷೆ ಲಲಿತಾ ಶರಣಪ್ಪ ರಾಠೋಡ, ಉಪಾಧ್ಯಕ್ಷೆ ಜ್ಯೋತಿ ತೆಗ್ಗಿನಕೇರಿ ಮತ್ತು ಸದಸ್ಯರು ಪಾಲ್ಗೊಂಡಿದ್ದರು.

ನಿವೃತ್ತ ಇಂಜಿನಿಯರ್ ಎಂ.ಎ. ಹಿರೇಮಠ, ಸುರೇಶ ಸಂಗಪ್ಪ ನಾಯ್ಕರ ಮುಂತಾದವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿಟ್ಟು ಶುಭ ಹಾರೈಸಿದರು. ಸುರೇಶ ಅವರೆಡ್ಡಿ ಸ್ವಾಗತಿಸಿದರು. ಅಂದಪ್ಪ ವೀರಾಪುರ ನಿರೂಪಿಸಿದರು. ಸಮಾರಂಭಕ್ಕೂ ಮುನ್ನ ಲಿಂ. ಸೋಮಶೇಖರ ಶಿವಾಚಾರ್ಯರ ಭಾವಚಿತ್ರದ ಮೆರವಣಿಗೆ ಉತ್ಸವ ಅಬ್ಬಿಗೇರಿ ಮೂಲಹಿರೇಮಠದಿಂದ ನರೇಗಲ್ಲ ರಸ್ತೆಯಲ್ಲಿರುವ ಹೊಸಮಠದವರೆಗೆ ಜರುಗಿತು.

ರೋಣ ಶಾಸಕ ಜಿ.ಎಸ್. ಪಾಟೀಲ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಆಧುನಿಕ ಯುಗದಲ್ಲಿ ಬೇಕಾದಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಬೆಳೆದರಷ್ಟೇ ಸಾಲದು, ಅದರೊಂದಿಗೆ ಮನುಷ್ಯನಲ್ಲಿ ಮಾನವೀಯತೆಯ ಅಂತಃಕರಣ ಬೆಳೆದು ಬರಬೇಕಾಗಿದೆ. ಲಿಂ. ಶ್ರೀ ಸೋಮಶೇಖರ ಶಿವಾಚಾರ್ಯರು ಆಡಿದಂತೆ ಕೆಲಸ ಮಾಡಿ ತೋರಿದವರು. ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ ಶ್ರೀಗಳ ಜೀವನದರ್ಶನ ನಮ್ಮೆಲ್ಲರಿಗೂ ದಾರಿದೀಪವಾಗಿದೆ ಎಂದರು.


Spread the love

LEAVE A REPLY

Please enter your comment!
Please enter your name here