ವಿಜಯಸಾಕ್ಷಿ ಸುದ್ದಿ, ಗದಗ : ಸರಕಾರಿ ಶಾಲೆಗಳ ಸಬಲೀಕರಣದಲ್ಲಿ ಸಮುದಾಯದ ಪಾತ್ರ ಪ್ರಮುಖವಾಗಿದ್ದು, ದಾನಿಗಳು `ನನ್ನ ಶಾಲೆ-ನನ್ನ ಕೊಡುಗೆ’ ಎಂಬುದನ್ನು ಆತ್ಮೀಯತೆಯಿಂದ ಸ್ವೀಕರಿಸಿ ಸರಕಾರಿ ಶಾಲೆಗಳತ್ತ ಬರಬೇಕೆಂದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.
ಅವರು ಬುಧವಾರ ಗದುಗಿನ ಸಿದ್ಧರಾಮೇಶ್ವರ ನಗರದ ಸ.ಹಿ.ಪ್ರಾ.ಶಾ. ನಂ-೬ರಲ್ಲಿ ಜರುಗಿದ ೭ನೇ ವರ್ಗದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸಂಜೀವಪ್ಪ ವಾಲೀಕಾರ ಸುಮಾರು ೧೦ ಸಾವಿರ ರೂ. ಮೌಲ್ಯದ ಮೈಕ್‌ಸೆಟ್‌ನ್ನು ಹಾಗೂ ಶಾಲಾ ಗುರುಮಾತೆ ಜಿ.ಎಂ. ದೇವಗಿರಿ ಅವರು ಮಕ್ಕಳಿಗೆ ಕುಡಿಯುವ ನೀರಿನ ಬಾಟಲ್‌ಗಳನ್ನು ದೇಣಿಗೆಯಾಗಿ ನೀಡಿದ್ದು, ಇದೇ ರೀತಿ ದಾನಿಗಳು ಸರಕಾರಿ ಶಾಲೆಯತ್ತ ಗಮನ ಹರಿಸಬೇಕೆಂದರು.
ಶಾಲಾ ಮುಖ್ಯೋಪಾಧ್ಯಾಯ ಎಂ.ಎಂ. ಜೋಗಿನ ಮಾತನಾಡಿ, ಹಿಂದುಳಿದ ಪ್ರದೇಶದ ಮಕ್ಕಳು ಪ್ರತಿಭಾನ್ವಿತರಾಗಿದ್ದು ಕಲಿಕೆಯಲ್ಲಿ ಆಸಕ್ತಿ ತೋರಿ ಉತ್ತಮ ಫಲಿತಾಂಶ ಹೊಂದುತ್ತಾರೆ. ಶಾಲೆಗಳ ಅಗತ್ಯಗಳಿಗೆ ದಾನಿಗಳ ಸಹಕಾರ ಅವಶ್ಯವೆಂದರು.
ವಿದ್ಯಾರ್ಥಿನಿಯರು ಮಹಿಳಾ ಸುರಕ್ಷತೆಗಾಗಿ ಇರುವ ಯೋಜನೆಯೊಂದನ್ನು ಪ್ರೂಜೆಕ್ಟರ್ ಮೂಲಕ ಪ್ರಸ್ತುತಪಡಿಸಿದರು. ಸಿಆರ್‌ಪಿ ರೇಶ್ಮಾ ಬೆಣಗಿ ಸ್ವಾಗತಿಸಿದರು. ಎಂ.ಎ. ಕಂದಗಲ್ಲ ನಿರೂಪಿಸಿದರು. ಎಸ್.ಆರ್. ಕಲ್ಯಾಣ್ಕರ್ ಪರಿಚಯಿಸಿದರು ಜಿ.ಎಂ. ದೇವಗಿರಿ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳು, ಪಾಲಕ-ಪೋಷಕರು ಪಾಲ್ಗೊಂಡಿದ್ದರು.