ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀ ಶಂಕರಮಠ ಸೇವಾ ಸಮಿತಿ ವತಿಯಿಂದ ಭವ್ಯವಾಗಿ ನಿರ್ಮಾಣ ಗೊಂಡಿರುವ ಶ್ರೀ ಶಂಕರ ಸಾಂಸ್ಕೃತಿಕ ಭವನವು ತತ್ವಜ್ಞಾನ ಪ್ರಸಾರದ ಶಕ್ತಿ ಕೇಂದ್ರವಾಗಲಿ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವರಾದ ಡಾ. ಎಚ್.ಕೆ. ಪಾಟೀಲ ಆಶಿಸಿದರು.
ಗದುಗಿನ ಸಂಭಾಪುರ ರಸ್ತೆಯ ಕೇಶವ ಪಾರ್ಕ್ನಲ್ಲಿರುವ ಶ್ರೀ ಶಂಕರಮಠದ ಆವರಣದ ಶ್ರೀ ಶಂಕರ ಸಾಂಸ್ಕೃತಿಕ ಭವನದ ಮೊದಲ ಮಹಡಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
`ಜ್ಞಾನವೇ ಶಕ್ತಿ’ ಎಂದು ವಿದ್ವಾಂಸರು ಹೇಳಿದ್ದಾರೆ. ಅದರಂತೆ ಶಂಕರ ಸಾಂಸ್ಕೃತಿಕ ಭವನವು ಮಂಗಲ ಕಾರ್ಯಗಳು ಹಾಗೂ ಸಭೆ-ಸಮಾರಂಭಗಳಿಗೆ ಸೀಮಿತವಾಗದೇ ಜ್ಞಾನದ ಅತ್ಯುನ್ನತ ತತ್ವವಾದ ಅದ್ವೈತ ತತ್ವ ಪ್ರಸಾರ ಕಾರ್ಯ ಕೈಗೊಳ್ಳಲಿ ಎಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಶಂಕರ ಮಠ ಸೇವಾ ಸಮಿತಿಯ ಪ್ರದಾನ ಕಾರ್ಯದರ್ಶಿ ವೇ.ಮೂ ಡಾ. ರತ್ನಾಕರಭಟ್ ಜೋಶಿ ಮಾತನಾಡಿ, ಶ್ರೀ ಶಂಕರಮಠ ಸ್ಥಾಪನೆಗೆ ಮೂಲ ಪ್ರೇರಣೆ ನೀಡಿದವರು ಕೆ.ಎಚ್. ಪಾಟೀಲರು ಹಾಗೂ ಅವರು ಗೋಂದಾವಲಿ ಬ್ರಹ್ಮಚೈತನ್ಯ ಮಹಾರಾಜರು. ಸದ್ಭಕ್ತರು ಅವರ ಆಶಯದಂತೆ ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಸಚಿವರಾದ ಎಚ್.ಕೆ. ಪಾಟೀಲ, ಶಂಕರ ಸಾಂಸ್ಕೃತಿಕ ಭವನ ನಿರ್ಮಾಣಗೊಳ್ಳಲು ವಿಶೇಷ ಸಹಾಯಕ ಸಹಕಾರ, ಸರಕಾರದ ಅನುದಾನವನ್ನು ನೀಡಿದ್ದಾರೆ. ಹೀಗಾಗಿ ಕೆ.ಎಚ್. ಪಾಟೀಲರ ಭಾವಚಿತ್ರ ಅನಾವರಣ ಔಚಿತ್ಯಪೂರ್ಣವಾಗಿದೆ. ಅಲ್ಲದೆ, ಮಾಜಿ ಸಂಸದರಾದ ಶಿವಕುಮಾರ ಉದಾಸಿ, ವಿಧಾನಪರಿಷತ್ ಸದಸ್ಯರಾದ ಎಸ್.ವ್ಹಿ. ಸಂಕನೂರರೂ ಸಹ ಸರಕಾರದ ಅನುದಾನ ನೀಡಿದ್ದಾರೆ ಎಂದು ಸ್ಮರಿಸಿದರು.
ವಿ.ಪ ಸದಸ್ಯ ಎಸ್.ವ್ಹಿ. ಸಂಕನೂರ ಮಾತನಾಡಿ ಬ್ರಾಹ್ಮಣ ಸಮುದಾಯವು ಸಂಖ್ಯೆಯಲ್ಲಿ ಚಿಕ್ಕದಾದರೂ ಸಮಸ್ತ ಸಮಾಜಕ್ಕೆ ಜ್ಞಾನ ಮತ್ತು ಸಂಸ್ಕಾರದ ಮೂಲಕ ಮಾರ್ಗದರ್ಶಿ ಸಮುದಾಯವಾಗಿದೆ ಎಂದು ಹೇಳಿದರು.
ವೀರನಾರಾಯಣ ವ ತ್ರಿಕೂಟೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಡಾ. ಕುಶಾಲ ಗೋಡಖಿಂಡಿ, ಗದಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಹೆಸರಾಂತ ವೈದ್ಯರಾದ ಸೌ. ಡಾ. ರಾಧಿಕಾ ಕುಲಕರ್ಣಿ, ನಿವೃತ್ತ ಪ್ರಾಧ್ಯಾಪಕ ಡಾ. ಆರ್.ಆರ್. ಜೋಶಿ, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶಂಕರ ಮಠ ಸೇವಾ ಸಮಿತಿಯ ಅಧ್ಯಕ್ಷ ಡಾ. ಜಿ.ಆರ್. ನೆರ್ಲೇಕರ್ ಉಪಸ್ಥಿತರಿದ್ದರು. ವಿಶೇಷ ಆಮಂತ್ರಿತರಾಗಿ ಡಾ. ಉದಯ ಕುಲಕರ್ಣಿ, ಗದಗ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ವೆಂಕಟೇಶ ಕುಲಕರ್ಣಿ, ನಗರಸಭಾ ಸಸದ್ಯರಾದ ಲಲಿತಾ ಅಸೂಟಿ ಪಾಲ್ಗೊಂಡಿದ್ದರು.
ವೇ. ಮೂ. ದತ್ತಂಭಟ್ ತೆಂಬದಮನಿ, ಅಪ್ಪಣ್ಣ ಸೊರಟೂರ ಹಾಗೂ ಬ್ರಹ್ಮ ವೃಂದದವರು ವೇದಘೋಷ ನೆರವೇರಿಸಿದರು. ಸೌಜನ್ಯ ತೆಂಬದಮನಿ, ಪೂರ್ಣ ಕುಲಕರ್ಣಿ ಪ್ರಾರ್ಥಿಸಿದರು. ಪ್ರೊ. ಅನಿಲ ವೈದ್ಯ ಸ್ವಾಗತಿಸಿದರು, ಡಾ. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಶಂಕರಮಠ ಸೇವಾ ಸಮಿತಿ ಕೋಶಾಧ್ಯಕ್ಷ ಎ.ಡಿ. ಗೋಡಖಿಂಡಿ ವಂದಿಸಿದರು.
ಸಮಾರAಭದಲ್ಲಿ ರವೀಂದ್ರ ಜೋಶಿ, ಅನಿಲ ತೆಂಬದಮನಿ, ಅನಿಲ ಪುರಾಣಿಕ, ಕಲಾವತಿ ಅಲಬೂರ, ಪ್ರಸನ್ನಕುಮಾರ ಇನಾಮಾರ, ಕೃಷ್ಣಾಜಿ ನಾಡಿಗೇರ, ಅಜಯಕುಮಾರ ದಪ್ತರದಾರ, ಶಂಕರಮಠ ಸೇವಾ ಸಮಿತಿ ಸದಸ್ಯರು, ಬ್ರಾಹ್ಮಣ ಸಮಾಜದ ಬಾಂಧವರು ಪಾಲ್ಗೊಂಡಿದ್ದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಗದುಗಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪರಮಪೂಜ್ಯ ನಿರ್ಭಯಾನಂದ ಸರಸ್ವತಿ ಮಹಾಸ್ವಾಮಿಗಳವರು ಮಾತನಾಡಿ, ತಾತ್ವಿಕವಾಗಿ ಸರ್ವರ ಸಮಾನತೆಯನ್ನು ಸಾರುವ ಅದ್ವೈತ ತತ್ವಜ್ಞಾನವು ಜಗತ್ತಿನ ಸರ್ವ ತತ್ವಗಳಿಗೂ ಅನ್ವಯಿಸುವ ಅತ್ಯಂತ ಶ್ರೇಷ್ಠ ತತ್ವವಾಗಿದೆ. ಶಂಕರರ ಜೀವನ ಮತ್ತು ಬೋಧನೆಗಳ ಪ್ರಸರಣ ಕಾರ್ಯ ಸಾಂಸ್ಕೃತಿಕ ಭವನಗಳಿಂದ ನೆರವೇರಲಿ ಎಂದು ನುಡಿದರು.