ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ತಾಲೂಕಿನ ಶಿಗ್ಲಿಯಲ್ಲಿ ಕೊಟ್ಟೂರೇಶ್ವರ ಮಹಾಕ್ಷೇತ್ರಕ್ಕೆ 26ನೇ ವರ್ಷದ ಪಾದಯಾತ್ರೆ ಮಹೋತ್ಸವದ ಅಂಗವಾಗಿ ಬುಧವಾರ ಸಂಜೆ ಗ್ರಾಮದ ಸೇವಾ ಮಂದಿರದಲ್ಲಿ ಕೊಟ್ಟೂರೇಶ್ವರ ಕಾರ್ತೀಕೋತ್ಸವ ಮತ್ತು ಧರ್ಮಸಭೆ ಜರುಗಿತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಬನ್ನಿಕೊಪ್ಪ ಸುಜ್ಞಾನದೇವ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ದೀಪದ ಬೆಳಕಿನಂತೆ ಮನುಷ್ಯನ ಭಾವನೆಗಳು ಪರಿಶುದ್ಧವಾಗಿರಲಿ. ದೀಪ ಎಲ್ಲರನ್ನೂ ಒಗ್ಗೂಡಿಸುವ, ಬಾಂಧವ್ಯ ಬೆಸೆಯುವ ಚೈತನ್ಯಶಕ್ತಿ ಹೊಂದಿದೆ. ಬದುಕಿನಲ್ಲಿ ಪರಿವರ್ತನಾಶೀಲತೆಯನ್ನು ತರುವ ಕಾರ್ತಿಕಮಾಸದ ದೀಪದಿಂದ ಮನುಷ್ಯನಲ್ಲಿನ ಕತ್ತಲೆಯನ್ನು ತೆಗೆದು ಹೊಸ ಬೆಳಕನ್ನು ನೀಡುವದರ ಸಂಕೇತವಾಗಿದೆ.
ಉರಿಯುತ್ತಿರುವ ದೀಪ ತನ್ನ ಪ್ರಕಾಶಕ್ಕೆ ಯಾವ ತೊಂದರೆ ಆಗದಂತೆ ಸಾವಿರಾರು ಇತರೇ ದೀಪಗಳನ್ನು ಹೊತ್ತಿಸಬಲ್ಲದು. ಅದೇ ರೀತಿ ಧರ್ಮ ಮತ್ತು ಧರ್ಮಾಚಾರ್ಯರು ಜ್ಞಾನ ಬೋಧೆಯ ಮೂಲಕ ಜನ ಸಮುದಾಯದಲ್ಲಿ ಜಾಗೃತಿಯನ್ನು ಉಂಟು ಮಾಡುತ್ತಾ ಬಂದಿದ್ದಾರೆ. ಎಲ್ಲವನ್ನೂ ಹಣದಿಂದ ಪಡೆಯುವ ನಾವು ನೆಮ್ಮದಿ ಮತ್ತು ಶಾಂತಿಯನ್ನು ಇತರರಿಂದ ಪಡೆಯಲು ಸಾಧ್ಯವಿಲ್ಲ. ಅದನ್ನು ಆಚರಣೆ ಮೂಲಕ ಪಡೆದುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಧರ್ಮ ಕಾರ್ಯಗಳು ನಮಗೆ ಶಾಂತಿ, ನೆಮ್ಮದಿ ನೀಡುತ್ತವೆ. ಶಿಗ್ಲಿ ಗ್ರಾಮದಲ್ಲಿ ಕಳೆದ 26 ವರ್ಷಗಳಿಂದ ಕೊಟ್ಟೂರು ಕ್ಷೇತ್ರಕ್ಕೆ ಪಾದಯಾತ್ರೆಯ ಮೂಲಕ ತಲುಪುವ ಕಾರ್ಯವನ್ನು ಭಕ್ತಿಯಿಂದ ಮಾಡುತ್ತಿರುವ ಇಲ್ಲಿನ ಜನರ ಭಕ್ತಿಯ ಹೆಜ್ಜೆಗಳು ಯಶಸ್ವಿಯಾಗಿ ಸಾಗಲಿ ಎಂದು ಹಾರೈಸಿದರು.
ಸೇವಾ ಮಂದಿರದ ಇಷ್ಟಲಿಂಗ ಸ್ವಾಮೀಜಿ ಸಾನ್ನಿಧ್ಯ ಹಾಗೂ ಗುರು ಕೊಟ್ಟೂರೇಶ್ವರ ವಿವಿಧೋದ್ದೇಶಗಳ ಸೇವಾ ಸಮಿತಿ ಅಧ್ಯಕ್ಷ ಮಹಾದೇವಪ್ಪ ಬೆಳವಗಿ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಎಸ್‌ಡಿಎಂ ಕಾಲೇಜು ಉಪಾಧ್ಯಕ್ಷ ವಿ.ಜೀವಂಧರ್ ಕುಮಾರ, ಎಸ್.ಪಿ. ಬಳಿಗಾರ, ನಿಜಗುಣಯ್ಯ ಮುಳಗುಂದಮಠ, ಶಂಕರ ರಾಗಿ, ಯಲ್ಲಪ್ಪ ತಳವಾರ, ಡಿ.ವೈ. ಹುನಗುಂದ, ರಾಜು ಮಡಿವಾಳರ ಭಾಗವಹಿಸಿದ್ದರು. ಮುಳುಗುಂದಮಠ ಸಹೋದರಿಯರು ಪ್ರಾರ್ಥಿಸಿದರು. ಈರಣ್ಣ ಅಂಗಡಿ, ರಾಜು ಓಲೇಕಾರ ನಿರೂಪಿಸಿದರು.