ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎನ್. ಶ್ರೀಧರ್ ಅವರು ಶುಕ್ರವಾರ ಲಕ್ಕುಂಡಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಹಾಗೂ ಬಿ.ಎಚ್. ಪಾಟೀಲ ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ಎಸ್‌ಎಸ್‌ಎಲ್‌ಸಿ ಪೂರ್ವಭಾವಿ-1 ವಿಜ್ಞಾನ ವಿಷಯದ ಪರೀಕ್ಷಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಈಗಾಗಲೇ ಶಾಲಾ ಶಿಕ್ಷಣ ಇಲಾಖೆ ನೀಡಿರುವ ಮಾರ್ಗದರ್ಶನದಂತೆ ತಾವೆಲ್ಲ ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಿಸಲು ವಿದ್ಯಾರ್ಥಿವಾರು ಟ್ರ‍್ಯಾಕಿಂಗ್ ವ್ಯವಸ್ಥೆ ಅಡಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕಾ ಮಟ್ಟವನ್ನು ನಿಖರವಾಗಿ ಗುರುತಿಸಿ, ಪರೀಕ್ಷೆಗಳ ಆಧಾರದ ಮೇಲೆ ನಿರಂತರವಾಗಿ ಟ್ರ್ಯಾಕಿಂಗ್ ನಡೆಸಬೇಕು. ವಿದ್ಯಾರ್ಥಿಗಳನ್ನು ಸಾಮರ್ಥ್ಯಾನುಸಾರ ಗುಂಪು ಮಾಡಿ, ಅಗತ್ಯ ಕ್ರಮ ಕೈಗೊಂಡು ಮೌಲ್ಯಮಾಪನ ಮಾಡಿ ಪೋಷಕರ ಸಭೆಯಲ್ಲಿ ಮಕ್ಕಳಿಗೆ ಹಾಗೂ ಪೋಷಕರಿಗೆ ತಿಳಿಸಿ, ಗಮನಿಸಿದ ತಪ್ಪನ್ನು ಸರಿಪಡಿಸಿ. ಮುಂದಿನ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವಲ್ಲಿ ಸತತ ಪ್ರಯತ್ನ ನಿಮ್ಮದಾಗಿರಲಿ ಎಂದರು.
ಓದು–ಬರಹದಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರತಿದಿನ ನಿಗದಿತ ಸಮಯದಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ನಿಧಾನ ಕಲಿಕೆಯ ಹಾಗೂ ಓದು–ಬರಹದಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ, ವಿಶೇಷ ಗಮನ ಹರಿಸಿ ಇಲಾಖೆ ನೀಡಿದ ತರಬೇತಿ ಹಾಗೂ ಮಾರ್ಗದರ್ಶನದಂತೆ ಕನಿಷ್ಠ 40+ ಅಂಕ ಗಳಿಸುವಂತೆ ವಿಶೇಷ ತರಗತಿಗಳು, ಪುನರಾವಲೋಕನ, ಗುಂಪು ಚಟುವಟಿಕೆ ಹಾಗೂ ಮೇಧಾವಿ ವಿದ್ಯಾರ್ಥಿಗಳಿಗೆ ಅಪ್ಲೈಡ್ ಪ್ರಶ್ನೆಗಳ ಅಭ್ಯಾಸಕ್ಕೆ ಒತ್ತು ನೀಡುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆರ್.ಎಸ್. ಬುರಡಿ, ಎಪಿಸಿಓ ಎಸ್.ಎಸ್. ಕುರಿಯವರ, ತಾಂತ್ರಿಕ ಸಹಾಯಕ ಎಂ.ಎಚ್. ಸವದತ್ತಿ ಹಾಗೂ ಎರಡೂ ಶಾಲೆಯ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.
ನಮ್ಮೆಲ್ಲರ ಪ್ರಯತ್ನ ಕೇವಲ ಮಕ್ಕಳ ಉತ್ತೀರ್ಣತೆಗಷ್ಟೇ ಸೀಮಿತವಾಗದೆ, ಎಲ್ಲ ವಿದ್ಯಾರ್ಥಿಗಳು ಗುಣಾತ್ಮಕ ಕಲಿಕೆಯನ್ನು ಹೊಂದುವಂತೆ ಪ್ರಯತ್ನಿಸೋಣ. ಸರ್ಕಾರದಿಂದ ನೀಡಿದ 29 ಅಂಶಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಜಿಲ್ಲೆಯ ಫಲಿತಾಂಶವನ್ನು ಶೇ. 100ಕ್ಕೆ ತಲುಪಿಸುವಂತೆ ಎಲ್ಲರೂ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.



