ಕಾರ್ಯಾಗಾರದ ಸಂಪೂರ್ಣ ಸದ್ಬಳಕೆ ಆಗಲಿ: ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರಿ ನೌಕರರಿಗೆ ಇತ್ತೀಚೆಗೆ “ಕರ್ನಾಟಕ ಆರೋಗ್ಯ ಸಂಜೀವಿನಿ” ಎಂಬ ನಗದುರಹಿತ ಆರೋಗ್ಯ ಸೇವೆ ಒದಗಿಸುವ ಯೋಜನೆ ಜಾರಿಗೊಳಿಸಲಾಗಿದೆ. ಇದರ ನೋಂದಣಿ ಮತ್ತು ಸರಿಯಾದ ಅನುಷ್ಠಾನಕ್ಕೆ ಇರುವ ಗೊಂದಲಗಳ ನಿವಾರಣೆಗೆ ಈ ಕಾರ್ಯಾಗಾರ ಸಹಕಾರಿಯಾಗಲಿದೆ ಎಂದು ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಹೇಳಿದರು.

Advertisement

ಜಿಲ್ಲಾಧಿಕಾರಿಗಳ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಖಜಾನೆ ಇಲಾಖೆ (ಗದಗ) ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ಗದಗ ಶಾಖೆ) ಇವರ ಆಶ್ರಯದಲ್ಲಿ ಊಖಒಎಸ್‌ ತಂತ್ರಾಂಶ–2.0 ಹಾಗೂ ಎಂಎಸ್‌ಎಸ್ ಕುರಿತು ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಿಂಗಳ ಕೊನೆಯಲ್ಲಿ ಸರಿಯಾಗಿ ವೇತನ ಪಾವತಿಯಾಗುವಂತೆ ನೋಡಿಕೊಳ್ಳಬೇಕು. ವೇತನ ಪಾವತಿ ಪ್ರಕ್ರಿಯೆ ತಾಂತ್ರಿಕ ಪರಿಣಿತ ನಿರ್ವಾಹಕನಿಂದ ಮಾತ್ರ ಸಾಧ್ಯ. ಹೆಚ್‌ಆರ್‌ಎಂಎಸ್‌ ಹಾಗೂ ಖಜಾನೆ–2 ತಂತ್ರಾಂಶವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು, ನೌಕರರಿಗೆ ವೇತನ ಪಾವತಿಯಾಗುವಂತೆ ಗಮನಹರಿಸಬೇಕು ಎಂದು ಅವರು ಹೇಳಿದರು.

ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಮಾತನಾಡಿ, ಇತ್ತೀಚೆಗೆ ಸರ್ಕಾರದ ಎಲ್ಲಾ ಯೋಜನೆಗಳ ಅನುಷ್ಠಾನದಲ್ಲಿ ತಾಂತ್ರಿಕತೆ ಅಳವಡಿಸಲಾಗಿದೆ. ಅದೇ ರೀತಿ ನೌಕರರ ವೇತನ ಹಾಗೂ ಸೇವೆಗಳಿಗೂ ತಾಂತ್ರಿಕ ನಿರ್ವಹಣೆ ಅಗತ್ಯವಾಗಿದೆ. ನೌಕರರ ಜಿಪಿಎಫ್‌, ಕೆಜಿಐಡಿ ವಿಮೆ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಈಗ ಬೆರಳ ತುದಿಯಲ್ಲಿ ನಿರ್ವಹಿಸಬಹುದಾದ ವ್ಯವಸ್ಥೆ ರೂಪಿಸಲಾಗಿದೆ. ಎಲ್ಲರೂ ಆರೋಗ್ಯ ಸಂಜೀವಿನಿ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡು, ಅನಾರೋಗ್ಯದ ಸಂದರ್ಭಗಳಲ್ಲಿ ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಯೋಜನಾಧಿಕಾರಿ ನೀಲಮಾ ಬಿ. ಅವರು ಊಖಒಎಸ್‌–2.0 ಮತ್ತು ಇ–ಖಜಾನೆ ಕುರಿತು, ಸುಧಾಮಣಿ ಅವರು ಎಂಎಸ್‌ಎಸ್ ಮತ್ತು ಇಎಸ್‌ಎಸ್ ಕುರಿತು, ತಾಂತ್ರಿಕ ತರಬೇತುದಾರ ಸುಮಂತ್ ಅವರು ಊಖಒಎಸ್‌–2.0 ಅಪ್ಲಿಕೇಶನ್‌ ಕುರಿತು ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗದಗ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಎಸಿ ಗಂಗಪ್ಪ ಎಂ., ಅಧಿಕಾರಿಗಳಾದ ಆರ್.ಎಸ್. ಬುರಡಿ, ಹರಿನಾಥ ಬಾಬು, ಜಿ.ಎಂ. ಮುಂದಿನಮನಿ ಸೇರಿದಂತೆ ನೌಕರ ಸಂಘದ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು ಭಾಗವಹಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಹಿರಿಯ ಮಾಜಿ ಉಪಾಧ್ಯಕ್ಷ ರವಿ ಗುಂಜೀಕರ್ ಅತಿಥಿಗಳಾಗಿ ಮಾತನಾಡಿ, “ನೌಕರರ ಆರೋಗ್ಯ ಸಮಸ್ಯೆಗಳಿಗೆ ಆರೋಗ್ಯ ಸಂಜೀವಿನಿ ಯೋಜನೆ ಅತ್ಯಂತ ಸಹಕಾರಿಯಾಗಿದೆ. ಪ್ರತಿ ತಿಂಗಳು ಸಣ್ಣ ಪ್ರಮಾಣದ ವಂತಿಗೆ ನೀಡುವುದರಿಂದ ಅನಾರೋಗ್ಯದ ಸಂದರ್ಭದಲ್ಲಿ ಆರ್ಥಿಕ ಸಹಾಯ ದೊರೆಯಲಿದೆ. ನಗದುರಹಿತ ಸೇವೆ ಜಾರಿಗೊಳಿಸಲು ಹಲವು ವರ್ಷಗಳಿಂದ ರಾಜ್ಯ ಸರ್ಕಾರಿ ನೌಕರರ ಸಂಘ ಪ್ರಯತ್ನಿಸಿ ಯಶಸ್ವಿಯಾಗಿದೆ. ನೌಕರ ಬಾಂಧವರು ಇದರ ಸದ್ಬಳಕೆ ಮಾಡಿಕೊಳ್ಳಬೇಕು,” ಎಂದು ಕರೆ ನೀಡಿದರು.


Spread the love

LEAVE A REPLY

Please enter your comment!
Please enter your name here