ವಿಜಯಸಾಕ್ಷಿ ಸುದ್ದಿ, ರಾಯಚೂರು: ಇತಿಹಾಸವೆಂದೊಡನೆ ನಮ್ಮ ಅಕ್ಷಿಪಟಲದ ಮೇಲೆ ರಾಜ-ಮಹಾರಾಜರ ಶೌರ್ಯ, ಸಾಹಸಗಳು ಸಿಂಹದಂತೆ ಘರ್ಜಿಸುತ್ತಿದ್ದರೂ ಕಲಾ ಪ್ರೌಢಿಮೆಗೆ ಕರಗುವ ಮೃದುವಾದ ಮನಸ್ಸು, ಪ್ರೀತಿಗಾಗಿ ಬೆಲೆ ಕಟ್ಟಲಾಗದ ಭವ್ಯ ಮಹಲುಗಳ ಅರ್ಪಣೆ, ಕಲೆಯನ್ನು ಬೆಳೆಸಿದ ಅವರ ಹೃದಯ ಶ್ರೀಮಂತಿಕೆ ಗೋಚರವಾಗುತ್ತದೆ. ಅವರು ಅಂದು ರಕ್ತ, ಬೆವರು, ಹಣದ ಹೊಳೆಯನ್ನೇ ಹರಿಸಿ ನಿರ್ಮಿಸಿದ ನೂರಾರು ಸ್ಮಾರಕಗಳನ್ನು ಇಂದು ನಮ್ಮಿಂದ ರಕ್ಷಿಸಿಕೊಳ್ಳಲಾಗುತ್ತಿಲ್ಲವಲ್ಲ ಎಂಬುದೋದೇ ಅಳಲು.
ಇಂತಹ ಅಳಿವಿನ ಅಂಚಿನಲ್ಲಿರುವ ಸ್ಮಾರಕಗಳ ಪಟ್ಟಿಗೆ ಪುರಾತನ ಕಾಲದಲ್ಲಿ ಎಡೆದೊರೆ 2000 ನಾಡಿನ ಮೊರಟ 300 ವಿಭಾಗದ (ಈಗಿನ ಸಿರಿವಾರ ತಾಲೂಕಿನ ಮಲ್ಲಟ ಗ್ರಾಮ) ಬಳಗಾನೂರು ಗ್ರಾಮದ ಬ್ರಾಹ್ಮಣರಿಗೆ ದತ್ತಿ ನೀಡಲಾದ ಸರ್ವನಮಸ್ಯದ ಅಗ್ರಹಾರವಾಗಿದ್ದ ಪಿರಿಯ ಬಳೆಗಾರನೂರೆಂದೇ ಪ್ರಚಲಿತದಲ್ಲಿತ್ತು.
ಈ ಊರು ನಂತರದ ದಿನಗಳಲ್ಲಿ ರಾಯಚೂರು ದೋ-ಆಬ್ ಪ್ರದೇಶಕ್ಕೆ ಸೇರಿತು. ಬಳಗಾನೂರು ಗ್ರಾಮವನ್ನು ಕಲ್ಯಾಣ ಚಾಲುಕ್ಯರು, ಕಲಚೂರಿಯರು, ಸೇವುಣರು, ವಿಜಯನಗರದ ಅರಸರು, ಬಹುಮನಿ ಸುಲ್ತಾನರ ರಾಜರುಗಳ ಆಡಳಿತಕ್ಕೊಳಪಟ್ಟಿದ್ದ 22 ಅಗ್ರಹಾರಗಳಲ್ಲಿ ಒಂದಾಗಿತ್ತು.
ಬಳಗಾನೂರು ಕಳಚೂರಿಯರ ಮನೆತನದ ರಾಯಮುರಾರಿ ಸೋವಿದೇವನ ಆಳ್ವಿಕೆಯಲ್ಲಿ ಒಳಪಟ್ಟ ಈ ಬಳಗಾನೂರು ಅಂದು ಸಕಲ ಸಿರಿ-ಸಂಪತ್ತಿನಿಂದ ರಾರಾಜಿಸುತ್ತ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ.
ಕ್ರಿ.ಶ 1175ರಲ್ಲಿ ಕಳಚೂರಿ ಅರಸ ರಾಯಮುರಾರಿ ಸೋವಿ ದೇವನ ಆಳ್ವಿಕೆಯಲ್ಲಿ, ವಡ್ಡವ್ಯವಹಾರಿಯಾಗಿದ್ದ ಸಬ್ಬದೇವಶೆಟ್ಟಿ ಎಂಬ ವರ್ತಕ ಈ ಲಕ್ಷ್ಮೀನಾರಾಯಣ ದೇವಸ್ಥಾನವನ್ನು ಕಟ್ಟಿಸಿದ. ಇದು ವೇಸರ ಶೈಲಿಯಲ್ಲಿರುವ ಏಕಕೂಟ ವೈಷ್ಣವ ದೇವಸ್ಥಾನದ ಗರ್ಭಗುಡಿಯಲ್ಲಿ ನಾರಾಯಣ ತನ್ನ ಎಡತೊಡೆಯ ಮೇಲೆ ಲಕ್ಷ್ಮೀದೇವಿಯನ್ನು ಕೂಡಿಸಿಕೊಂಡಿರುವ ಕಪ್ಪುಶಿಲೆಯ ವಿಗ್ರಹವಿದೆ. ಇದು ಭಾರತದಲ್ಲಿಯೇ ಎರಡನೆಯದೆನ್ನಬಹುದಾದ ಅಪರೂಪದ ದಕ್ಷಿಣಾಭಿ ಲಕ್ಷ್ಮೀನಾರಾಯಣ ದೇವಸ್ಥಾನವೆಂದು ಹೇಳಲಾಗುತ್ತದೆ.
ಮಾರುತಿ ದೇವಸ್ಥಾನ ದಕ್ಷಿಣಾಭಿಮುಖವಾಗಿದ್ದು, ವಿಶೇಷವೆಂಬಂತೆ ಮಾರುತಿ ದೇವರ ಕೈಯಲ್ಲಿ ತ್ರಿಶೂಲವಿರುವುದನ್ನು ಕಾಣಬಹುದು. ಅದೇ ರೀತಿ ವೀರಭದ್ರೇಶ್ವರ ದೇವಾಲಯ ಉತ್ತರಾಭಿಮುಖವಾಗಿದೆ. ಗರ್ಭಗೃಹದಲ್ಲಿ ನಿಂತ ಭಂಗಿಯ ಕಪ್ಪು ಶಿಲೆಯ ವೀರಭದ್ರೇಶ್ವರ ವಿಗ್ರಹವಿದೆ. ನಗರೇಶ್ವರ ದೇವಾಲಯದ ಹತ್ತಿರದಲ್ಲಿ ಕ್ರಿ.ಶ 11 ಮತ್ತು 12ನೇ ಶತಮಾನದ ಎರಡು ತೃಟಿತ ಜೈನ ತೀರ್ಥಂಕರರ ವಿಗ್ರಹಗಳು, ತೃಟಿತ ಶಾಸನೋಕ್ತ ಮನೋಹರ ಚನ್ನಕೇಶವ ವಿಗ್ರಹ, ನವ ಶಿಲಾಯುಗ ಕಾಲದ ಮಾನವರು ವಾಸಮಾಡಿದ ಬೂದಿದಿಬ್ಬ, ನಾಗಭೂಷಣ ದೇವಾಲಯವಿದೆ.
ಐತಿಹಾಸಿಕ ಕುರುಹುಗಳಾಗಿರುವ ಮಂದಿರಗಳು ಜನರ ತಾತ್ಸಾರದಿಂದ ದನದ ಕೊಟ್ಟಿಗೆಗಳಾಗಿ, ತಿಪ್ಪೆಗುಂಡಿಗಳಾಗಿ ವಿರೂಪಗೊಂಡು ತಿಪ್ಪೆಯಲ್ಲಿಟ್ಟ ವಜ್ರದಂತಾಗಿದೆ. ಆದರೂ ಚಳಿ, ಗಾಳಿ, ಮಳೆಗಳಿಗೆ ಮೈಯೊಡ್ಡಿ ನಿಂತಿರುವ ಈ ದೇವಾಲಯಗಳು ಜೀರ್ಣೋದ್ಧಾರವಾದೀತೆ ಎಂದು ಕಾದು ಕುಳಿತಿವೆ. ಈ ಭಾಗದ ಜನ, ಜನಪ್ರತಿನಿಧಿಗಳು, ಪುರಾತತ್ವ ಇಲಾಖೆ ಸುಮ್ಮನೆ ಕುಳಿತರೆ ಮುಂದಿನ ಪೀಳಿಗೆಗೂ ಪೂರ್ವಜರ ಕಲಾಸಿರಿ ಕಳಚೂರಿಯರ ಕೊಂಡಿ ಕಳಚಿ ಕಾಲಗರ್ಭ ಸೇರುವ ಮುನ್ನ ರಕ್ಷಿಸಿ ಬಳುವಳಿಯಾಗಿ ಬಿಟ್ಟು ಹೋಗುವ ಕಾರ್ಯ ಆಗಬೇಕಿದೆ.
ತೋಟದ ಯಲ್ಲಮ್ಮ ದೇವಸ್ಥಾನ ಜಿಲ್ಲೆಯಲ್ಲಿಯೇ ಶಿಲಾಶಾಸನವುಳ್ಳ ಏಕೈಕ ತೋಟದ ಯಲ್ಲಮ್ಮ ದೇವಸ್ಥಾನ ಊರ ಹೊರವಲಯದಲ್ಲಿದ್ದು, ಇದರ ಮುಂಭಾಗದಲ್ಲಿ ಶಕ್ತಿ ಶಾಸನೋಕ್ತ ಗರ್ಭಗೃಹದಲ್ಲಿ ಯಲ್ಲಮ್ಮ ದೇವಿಯ ಮೂರ್ತಿಯಿದೆ ಹಾಗೂ 12ನೇ ಶತಮಾನಕ್ಕೆ ಸೇರಿದ ನವರಂಗವಿದೆ.


