ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ದುರ್ಘಟನೆ ನಡೆದಿದೆ.
ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಲಾವಣ್ಯ ಪ್ರತಾಪ್ ಮೃತಳಾಗಿದ್ದಾರೆ.
ಹಾಸ್ಟೆಲ್ ಕೋಣೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಸ್ನೇಹಿತರು ಕರೆ ಮಾಡಿದರೂ ಪ್ರತಿಕ್ರಿಯೆ ಇಲ್ಲದ ಹಿನ್ನೆಲೆ ಅನುಮಾನಗೊಂಡು ಬಾಗಿಲು ಒಡೆದು ನೋಡಿದಾಗ, ಆಕೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಮಾಹಿತಿ ಪಡೆದ ತಕ್ಷಣ ದುರ್ಗಾಪುರ ಪೊಲೀಸರ ತಂಡ ಕ್ಯಾಂಪಸ್‌ಗೆ ಆಗಮಿಸಿ, ಹಾಸ್ಟೆಲ್ ಕೊಠಡಿಯಿಂದ ಶವವನ್ನು ವಶಪಡಿಸಿಕೊಂಡಿತು. ಬಳಿಕ ಆಸ್ಪತ್ರೆಯಲ್ಲಿ ಇರಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಘಟನೆ ನಡೆದ ನಂತರ ಭಾನುವಾರ ಕ್ಯಾಂಪಸ್‌ನಲ್ಲಿ ನೀರವ ಮೌನ ಆವರಿಸಿತು.
ಮೃತಳ ತಂದೆ ಅನಿಲ್ ಕುಮಾರ್, ಕಾಲೇಜು ಆಡಳಿತದ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದು, ಘಟನೆ ಕುರಿತು ಕುಟುಂಬಕ್ಕೆ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಿಲ್ಲ ಎಂದು ತಿಳಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಮೃತ ವಿದ್ಯಾರ್ಥಿನಿ ಬಿಹಾರದ ಪಾಟ್ನಾ ನಿವಾಸಿಯಾಗಿದ್ದು, ವೈದ್ಯಕೀಯ ಅಧ್ಯಯನಕ್ಕಾಗಿ ಹಾಸ್ಟೆಲ್‌ನಲ್ಲಿ ತಂಗಿದ್ದರು. ಕಳೆದ ಕೆಲವು ಸೆಮಿಸ್ಟರ್‌ಗಳಲ್ಲಿ ಅನುತ್ತೀರ್ಣರಾದ ಕಾರಣ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಸ್ನೇಹಿತರು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.
ಈ ಸಾವು ಆತ್ಮಹತ್ಯೆಯೇ ಅಥವಾ ಬೇರೆ ಯಾವುದೇ ಅಂಶಗಳು ಒಳಗೊಂಡಿವೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



