ವಿಜಯಸಾಕ್ಷಿ ಸುದ್ದಿ, ಧಾರವಾಡ: ಜಿಲ್ಲೆಯ ಎಲ್ಲ ವಿಶೇಷ ಚೇತನ ಹಾಗೂ ದಿವ್ಯಾಂಗ ಮಕ್ಕಳ ಸಮೀಕ್ಷೆಯನ್ನು ಕೈಗೊಳ್ಳಲಾಗಿದ್ದು, ಅವರಿಗೆ ಅಗತ್ಯವಿರುವ ಉಪಕರಣ ಹಾಗೂ ಸೌಲಭ್ಯಗಳನ್ನು ಸರ್ಕಾರದಿಂದ ನೀಡಲಾಗುತ್ತಿದೆ. ವಿಶೇಷ ಚೇತನರನ್ನು ಸಂರಕ್ಷಿಸುತ್ತಿರುವ ಕುಟುಂಬಗಳಿಗೂ ಸರ್ಕಾರದ ನಿಯಮಾನುಸಾರ ನೆರವು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್ ಹೇಳಿದರು.
ಅವರು ಶುಕ್ರವಾರ ಬೆಳಿಗ್ಗೆ ಶಿಕ್ಷಕಿಯರ ಸರ್ಕಾರಿ ತರಬೇತಿ ಕಾಲೇಜು (ಟಿಸಿಡಬ್ಲ್ಯೂ) ಸಭಾಂಗಣದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಸಂತೋಷ ಲಾಡ್ ಫೌಂಡೇಶನ್ ಮತ್ತು ಜನಮುಖಿ ಸೇವಾ ಸಂಸ್ಥೆ ಸಂಯುಕ್ತವಾಗಿ ಆಯೋಜಿಸಿದ್ದ ವಿಶೇಷ ಚೇತನರು ಹಾಗೂ ಅವರ ಕುಟುಂಬದವರೊಂದಿಗೆ ಸಂವಾದ ಮತ್ತು ಸಂತೋಷ ಲಾಡ್ ಫೌಂಡೇಶನ್ ನೀಡಿರುವ ವಿಕಲಚೇತನರ ಸಾಧನಗಳನ್ನು ವಿತರಿಸಿ ಮಾತನಾಡಿದರು.
ವಿಕಲಚೇತನರನ್ನು ವಿಶೇಷ ಕಾಳಜಿ ಮತ್ತು ಹೆಮ್ಮೆಯಿಂದ ಸಂರಕ್ಷಿಸಬೇಕು. ಅವರ ಬಗ್ಗೆ ಕೇವಲ ಕರುಣೆ ತೋರದೆ, ನ್ಯಾಯಯುತವಾಗಿ ಅವರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವಲ್ಲಿ ಇಲಾಖೆಗಳು, ಅಧಿಕಾರಿಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಕ್ರಮ ವಹಿಸಬೇಕೆಂದು ಅವರು ಹೇಳಿದರು.
ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಮಾದರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಚಿವರ ಜನ್ಮದಿನದ ಹಿನ್ನೆಲೆಯಲ್ಲಿ ಅನೇಕ ವಿಕಲಚೇತನ ಮಕ್ಕಳಿಗೆ ವೀಲ್ಚೇರ್, ಆಟಿಕೆ ಸಾಮಾನು, ಹಣ್ಣು ಹಾಗೂ ಧಾನ್ಯದ ಕಿಟ್ ಮತ್ತು ವಿಕಲಚೇತನ ಮಗುವಿಗೆ ಆರ್ಥಿಕ ಸಹಾಯ ನೀಡಲಾಗಿದೆ. ವಿಕಲಚೇತನ ಹಾಗೂ ದಿವ್ಯಾಂಗ ಮಕ್ಕಳ ಯೋಗಕ್ಷೇಮ ಹಾಗೂ ಅವರ ಆರೋಗ್ಯ ಮತ್ತು ಸಂರಕ್ಷಣೆಗೆ ಸರ್ಕಾರದೊಂದಿಗೆ ಸರ್ಕಾರೇತರ ಸಂಸ್ಥೆಗಳು ಕೈಜೊಡಿಸಬೇಕು. ಇದರಿಂದ ವಿಕಲಚೇತನರಲ್ಲಿಯೂ ಬದುಕಿನ ಆತ್ಮವಿಶ್ವಾಸ ಮೂಡುತ್ತದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ವಿಶೇಷ ಕಾಳಜಿ ಮತ್ತು ಆತ್ಮವಿಶ್ವಾಸದ ಅಗತ್ಯವಿರುವ ವಿಶೇಷ ಚೇತನ ಹಾಗೂ ದಿವ್ಯಾಂಗ ಮಕ್ಕಳಿಗೆ ಸರ್ಕಾರಕ್ಕಿಂತ ಸಮಾಜದ ಹಾಗೂ ಸಮುದಾಯದ ಬೆಂಬಲದ ಅಗತ್ಯವಿದೆ. ವಿಶೇಷ ಚೇತನರಲ್ಲಿ ಸಾಮಾನ್ಯಗಿಂತ ವಿಶೇಷವಾದ ಬುದ್ಧಿವಂತಿಕೆ ಹಾಗೂ ಜ್ಞಾನ ಇರುತ್ತದೆ. ಇದನ್ನು ಗುರುತಿಸಿ, ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರ ಜನ್ಮದಿನದ ಹಿನ್ನೆಲೆಯಲ್ಲಿ ಸರ್ಕಾರೇತರ ಸಂಸ್ಥೆಗಳು ಹಾಗೂ ಇಲಾಖೆಗಳಿಂದ ಸಮಾಜಮುಖಿ ಕಾರ್ಯ ನೆರವೇರುತ್ತಿದೆ. ಜಿಲ್ಲಾ ಪಂಚಾಯಿತಿಯಿಂದ ಹಾಗೂ ಗ್ರಾಮ ಪಂಚಾಯಿತಿಗಳಿಂದ ವಿಕಲಚೇತನರ ಅಭಿವೃದ್ಧಿಗಾಗಿ ವಿಶೇಷ ಅನುದಾನಗಳನ್ನು ನೀಡಲಾಗುತ್ತಿದೆ ಎಂದು ಸಿಇಓ ಭುವನೇಶ ಪಾಟೀಲ ಅವರು ತಿಳಿಸಿದರು.



