ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಹೌದು, ಇದೇ ಫೆಬ್ರವರಿ 26, ಗುರುವಾರದಂದು ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಮಹತ್ವದ ಆದೇಶ ಹೊರಡಿಸಿದೆ. ಹೀಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲ ಕಸಾಯಿಖಾನೆ ಮುಚ್ಚುವಂತೆ ಆದೇಶಿಸಿದ್ದು,
ಒಂದು ವೇಳೆ ಆದೇಶ ಉಲ್ಲಂಘಿಸಿ ಪ್ರಾಣಿ ವಧೆ, ಮಾಂಸ ಮಾರಾಟ ಮಾಡಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ. ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ-2025ರ ಪ್ರಯುಕ್ತ 23ನೇ ಜನವರಿಯಿಂದ 17ನೇ ಫೆಬ್ರವರಿ 2025ರವರೆಗೆ ಮಾಂಸ ಮಾರಾಟವನ್ನು ನಿಷೇಧಿಸಲಾಗಿತ್ತು.
ಯಲಹಂಕ ವಲಯದ ಏರ್‌ಪೋರ್ಸ್ ಸ್ಟೇಷನಿಂದ 13 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಎಲ್ಲ ಮಾಂಸ ಮಾರಾಟದ ಉದ್ದಿಮೆಗಳು ಮುಚ್ಚಬೇಕು ಹಾಗೂ ಹೋಟೆಲ್ ಮತ್ತು ಡಾಬಾಗಳಲ್ಲಿ ಮಾಂಸಾಹಾರ ತಯಾರಿಕೆ ಮತ್ತು ಮಾರಾಟವನ್ನು ನಿಷೇಧ ಮಾಡಲಾಗಿತ್ತು. ಇದಕ್ಕೆ ವ್ಯಾಪಕ ವಿರೋಧಗಳು ವ್ಯಕ್ತವಾಗಿದ್ದವು. ಇದೀಗ ಮಹಾಶಿವರಾತ್ರಿಯಂದು ಫೆ.26ರಂದು ಸಹ ಮತ್ತೊಮ್ಮೆ ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.