ಧಾರವಾಡ: ಮೆಡಿಕಲ್ ಪಿಜಿ ವಿದ್ಯಾರ್ಥಿನಿಯೋರ್ವಳು ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದಲ್ಲಿ ಬೆಳಕಿಗೆ ಬಂದಿದೆ. ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್)ಯ ಸೈಕಿಯಾಟ್ರಿಕ್ ಪಿಜಿ ವಿಭಾಗದ ಮೊದಲನೇ ವರ್ಷದ ವಿದ್ಯಾರ್ಥಿನಿ ಡಾ. ಪ್ರಜ್ಞಾ ಪಾಲೇಗರ್ (24) ಮೃತ ದುರ್ಧೈವಿಯಾಗಿದ್ದು,
ಶಿವಮೊಗ್ಗ ಮೂಲದ ಡಾ. ಪ್ರಜ್ಞಾ, ಎರಡು ವಾರಗಳ ಹಿಂದಷ್ಟೇ ಪಿಜಿ ವ್ಯಾಸಂಗಕ್ಕಾಗಿ ಧಾರವಾಡಕ್ಕೆ ಬಂದಿದ್ದರು. ನಿನ್ನೆ ಅವರ ತಂದೆ–ತಾಯಿ ಭೇಟಿಗೆ ಬಂದಿದ್ದು, ಬಳಿಕ ತೆರಳಿದ್ದರು ಎನ್ನಲಾಗಿದೆ.
ಡಾ. ಪ್ರಜ್ಞಾ, ಡಾ. ಪ್ರಿಯಾ ಪಾಟೀಲ್ ಅವರೊಂದಿಗೆ ಹಾಸ್ಟೆಲ್ ರೂಮ್ ಶೇರ್ ಮಾಡಿಕೊಂಡಿದ್ದರು. ಆದರೆ ಪೋಷಕರು ಬಂದಿದ್ದ ಹಿನ್ನೆಲೆಯಲ್ಲಿ ಡಾ. ಪ್ರಿಯಾ ಆ ರಾತ್ರಿ ಹೊರಗಡೆ ಉಳಿದುಕೊಂಡಿದ್ದರು ಎಂದು ತಿಳಿದುಬಂದಿದೆ. ಈ ಕಾರಣದಿಂದ ಡಾ. ಪ್ರಜ್ಞಾ ಒಬ್ಬರೇ ರೂಮಿನಲ್ಲಿ ಇದ್ದರು.
ಬೆಳಗ್ಗೆ ಡಾ. ಪ್ರಿಯಾ ರೂಮಿಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಉಪನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವ್ಯಾಸಂಗದ ಒತ್ತಡ ಅಥವಾ ಮನಸ್ಸಿನ ಅಶಾಂತಿಯೇ ಈ ದುರ್ಘಟನೆಗೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



