HomeGadag Newsಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸಿದ್ಧರಾಗಿ : ಎಚ್.ಕೆ. ಪಾಟೀಲ

ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸಿದ್ಧರಾಗಿ : ಎಚ್.ಕೆ. ಪಾಟೀಲ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯ ನರಗುಂದ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದರೆ ಪ್ರವಾಹವನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಆ ನಿಟ್ಟಿನಲ್ಲಿ ತಾಲೂಕು ಆಡಳಿತವು ಸರ್ವ ಸನ್ನದ್ಧವಾಗುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನರಗುಂದ ತಾಲೂಕಿನ ಕೊಣ್ಣೂರ, ಲಕಮಾಪುರ, ವಾಸನ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿ ನಂತರ ನರಗುಂದ ನಗರದ ಪ್ರವಾಸಿ ಮಂದಿರದಲ್ಲಿ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರವಾಹ ನಿರ್ವಹಣೆಯಲ್ಲಿ ತಾಲೂಕಾಡಳಿತವು ನಿರಂತರವಾಗಿ ಜಿಲ್ಲಾಡಳಿತದೊಂದಿಗೆ ಸಂಪರ್ಕದಲ್ಲಿದ್ದು ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಇಲಾಖೆಯ ಅಧಿಕಾರಿಗಳ ನಿಷ್ಕಾಳಜಿ, ವಿಳಂಬ ಧೋರಣೆ ಸಹಿಸಲಾಗದು ಎಂದು ಎಚ್ಚರಿಸಿದರು.

ಪ್ರವಾಹದ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಗುರುತಿಸಿರುವ ಕಾಳಜಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳು ಇರುವ ಬಗ್ಗೆ ನಿಯೋಜಿತ ಅಧಿಕಾರಿಗಳು ಪರಿಶೀಲಿಸಿ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲು ತಿಳಿಸಿದ ಸಚಿವರು, ಕಾಳಜಿ ಕೇಂದ್ರದಲ್ಲಿ ಆರೋಗ್ಯ ಅಧಿಕಾರಿಗಳು ಹಾಜರಿದ್ದು ಕಾಳಜಿ ಕೇಂದ್ರಕ್ಕೆ ಆಗಮಿಸುವ ಎಲ್ಲರಿಗೂ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಪ್ರಮಾಣದ ಔಷಧಿಗಳನ್ನು ನೀಡಬೇಕು ಎಂದು ತಿಳಿಸಿದರು.

ಪ್ರವಾಹದ ಮುನ್ಸೂಚನೆ ದೊರೆತ ತಕ್ಷಣವೇ ಅಗ್ನಿಶಾಮಕ ತಂಡವು ವೇಗವಾಗಿ ಸ್ಥಳಕ್ಕೆ ತೆರಳಿ ರಕ್ಷಣೆಯಲ್ಲಿ ತೊಡಗಬೇಕು. ಸ್ಥಳೀಯರು ಹಾಗೂ ಅಧಿಕಾರಿಗಳೊಂದಿಗೆ ಸಮನ್ವಯದಿಂದ ನಿಭಾಯಿಸಲು ನಿರ್ದೇಶಿಸಿದರು.

Meeting at Tourist Mandir in Naragunda city

ಕೊಣ್ಣೂರಿನ ನದಿಯ ಭಾಗದಲ್ಲಿ 4-5 ಕಿ.ಮೀ ನದಿಯ ಅಗಲೀಕರಣ, ಹೂಳೆತ್ತುವ ಕುರಿತು ಸೆಪ್ಟೆಂಬರ್ 1ರೊಳಗೆ ಯೋಜನಾ ವರದಿ ಸಿದ್ಧಪಡಿಸಿ ಸಲ್ಲಿಸಲು ನೀರಾವರಿ ಇಲಾಖೆಯ ಅಧಿಕಾರಿ ಕಾಂಬಳೆ ಬಾಬು ಅವರಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, ನರಗುಂದ ತಾಲೂಕಿನ 8 ಹಾಗೂ ರೋಣ ತಾಲೂಕಿನ 8 ಗ್ರಾಮಗಳು ಪ್ರವಾಹಕ್ಕೆ ತುತ್ತಾಗುವ ಸಂಭವನೀಯ ಗ್ರಾಮಗಳು ಎಂದು ಗುರುತಿಸಲಾಗಿದೆ. ಈ ಎಲ್ಲ ಗ್ರಾಮಗಳಲ್ಲಿನ ಅಧಿಕಾರಿಗಳಿಗೆ ಪ್ರವಾಹ ಕುರಿತಂತೆ ಮಾಹಿತಿ ಹಂಚಿಕೊಳ್ಳಲು ತಿಳಿಸಿದ್ದು, ಯಾವುದೇ ಅನಾಹುತಕ್ಕೆ ಅವಕಾಶ ನೀಡದಂತೆ ಸೂಕ್ತ ಮುಂಜಾಗ್ರತೆ ವಹಿಸಲು ತಿಳಿಸಲಾಗಿದೆ ಎಂದರು.

ಜಿಲ್ಲಾಧಿಕಾರಿಗಳ ಖಾತೆಯಲ್ಲಿ 9.50 ಕೋಟಿ ಹಾಗೂ ನರಗುಂದ ತಹಸೀಲ್ದಾರರ ಖಾತೆಯಲ್ಲಿ 61.54 ಲಕ್ಷ ರೂ ಎಸ್.ಡಿ.ಆರ್.ಎಫ್ ಅನುದಾನವು ಮೀಸಲಿದೆ. ಉಳಿದಂತೆ ಎಲ್ಲ ತಹಸೀಲ್ದಾರರ ಖಾತೆಗಳಲ್ಲಿಯೂ ಅನುದಾನ ಇದ್ದು, ಪ್ರವಾಹ ನಿರ್ವಹಣೆಗೆ ಬಳಕೆ ಮಾಡಲಾಗುವುದು ಎಂದರು.

ಸಭೆಯಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ರಾಜುಗೌಡ, ಸಿದ್ದು ಪಾಟೀಲ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಉಪವಿಭಾಗಾಧಿಕಾರಿ ಗಂಗಪ್ಪ ಎಂ ಸೇರಿದಂತೆ ತಹಸೀಲ್ದಾರರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಲಕಮಾಪುರ ಗ್ರಾಮದ 4 ಕುಟುಂಬಕ್ಕೆ ತಲಾ 5 ಸಾವಿರದಂತೆ ಪರಿಹಾರ ನೀಡಲಾಗುತ್ತಿದೆ. ಅಂತೆಯೇ ವಿಠಲಾಪುರದ 14 ಕುಟುಂಬಗಳ 40 ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಆ ಕುಟುಂಬಗಳಿಗೂ ಸಹ ತಲಾ 5 ಸಾವಿರ ರೂ ಪರಿಹಾರ ನೀಡಲಾಗುತ್ತಿದೆ. ಪ್ರತಿ ಕಾಳಜಿ ಕೇಂದ್ರಕ್ಕೂ ಒಬ್ಬ ಅಧಿಕಾರಿಯನ್ನು ನಿಯೋಜಿಸಲಾಗಿದೆ. ನರಗುಂದ ತಾಲ್ಲೂಕಿನಲ್ಲಿ ಮೂರು ಮನೆಗಳು ಹಾನಿಗೀಡಾಗಿದ್ದು, ನಿಯಮಾನುಸಾರ ಪರಿಹಾರ ನೀಡಲಾಗುವದು ಎಂದು ಡಿಸಿ ಗೋವಿಂದರೆಡ್ಡಿ ತಿಳಿಸಿದರು.

ಅತಿವೃಷ್ಟಿ ಎದುರಾದಲ್ಲಿ, ಅಧಿಕಾರಿಗಳು ಗ್ರಾಮಗಳಲ್ಲಿ ಹಾಜರಿದ್ದು ಜನಸಾಮಾನ್ಯರಿಗೆ ತಿಳುವಳಿಕೆ ನೀಡಿ, ಎತ್ತರದ ಸ್ಥಳಗಳಿಗೆ ತೆರಳಲು ಸೂಚನೆ ನೀಡಬೇಕು. ತಗ್ಗು ಪ್ರದೇಶಗಳಲ್ಲಿ ಜನ-ಜಾನುವಾರು ವಾಸಿಸದಂತೆ ನೋಡಿಕೊಳ್ಳಬೇಕು. ಮಲಪ್ರಭಾ ನದಿಯ ನವೀಲುತೀರ್ಥ ಡ್ಯಾಂನಿಂದ ಹೆಚ್ಚುವರಿ ನೀರು ಬಿಡುವ ಮಾಹಿತಿ ದೊರೆತ ತಕ್ಷಣ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸಬೇಕು.
– ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!