ಬೆಂಗಳೂರು: ಡೀಸೆಲ್ ದರ ಮತ್ತು ಟೋಲ್ ಶುಲ್ಕ ಹೆಚ್ಚಳ ವಿರೋಧಿಸಿ, ಪರಿಷ್ಕರಣೆ ಮಾಡುವಂತೆ ಆಗ್ರಹಿಸಿ ನಡೆಸುತ್ತಿದ್ದ ಲಾರಿ ಮಾಲೀಕರ ಸಂಘದ ಲಾರಿ ಮುಷ್ಕರವನ್ನು ಕೊನೆಗೂ ವಾಪಸ್ ಪಡೆಯಲಾಗಿದೆ. ಮೂರು ದಿನಗಳಿಂದ ನಡೆಯುತ್ತಿದ್ದ ಲಾರಿ ಮುಷ್ಕರದ ಬಗ್ಗೆ ಮಾಧ್ಯಮಗಳೊಂದಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮಾತನಾಡಿದರು.
ಲಾರಿ ಮಾಲೀಕರು ಜೊತೆ ಸಭೆ ನಡೆಸಿದ್ದೇವೆ. ಆರು ಬೇಡಿಕೆಗಳನ್ನು ಇಟ್ಟಿದ್ದಾರೆ. ಮೊದಲು ಆಯುಕ್ತರ ಜೊತೆ ಸಭೆ ನಡೆಸಿದ್ದರು. ಆನ್‌ಲೈನ್‌ನಲ್ಲಿ ದಂಡ ಕಟ್ಟುವ ವ್ಯವಸ್ಥೆಯನ್ನು ಮಾಡಲಿದ್ದೇವೆ ಎಂದರು. ಒಟಿಎಸ್ ಮಾದರಿಯಲ್ಲಿ ದಂಡ ಪಾವತಿಗೆ ಅವಕಾಶ ಕಲ್ಪಿಸುವಂತೆ ಕೇಳಿದ್ದಾರೆ.
ಅದನ್ನು ಸಿಎಂ ಗಮನಕ್ಕೆ ತರಲಿದ್ದೇವೆ ಹಾಗೂ ಟೋಲ್ ವಿಚಾರವನ್ನೂ ಸಿಎಂ ಗಮನಕ್ಕೆ ತರುತ್ತೇನೆ ಎಂದು ಹೇಳಿದರು. ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಪ್ರತಿಕ್ರಿಯಿಸಿ, ನಾಲ್ಕು ಪ್ರಮುಖ ಬೇಡಿಕೆ ಇತ್ತು. ಬಾರ್ಡರ್ ಚೆಕ್‌ಪೋಸ್ಟ್ ಸಮಸ್ಯೆಯನ್ನು 3 ತಿಂಗಳಲ್ಲಿ ಬಗೆಹರಿಸುವ ಭರವಸೆ ನೀಡಿದ್ದಾರೆ. ಡಿಸೇಲ್ ದರ 2023ರಲ್ಲಿ ಯದ್ವಾತದ್ವಾ ಏರಿಕೆ ಮಾಡಿದ್ದರು. ಇದನ್ನು ಇನ್ನೊಂದು ಬಾರಿ ಅಧ್ಯಯನ ಮಾಡುವುದಾಗಿ ಹೇಳಿದ್ದಾರೆ ಎಂದರು.