ಬೆಂಗಳೂರು: ಕೇಂದ್ರ ಸರ್ಕಾರ ಅಗತ್ಯ ಅನುಮತಿ ನೀಡಿದರೆ ಮೇಕೆದಾಟು ಹಾಗೂ ಕೃಷ್ಣಾ ಮೇಲ್ದಂಡೆ ಬಾಕಿ ಯೋಜನೆಗಳನ್ನು ಜಾರಿಗೊಳಿಸಲು ಕರ್ನಾಟಕ ಸರ್ಕಾರ ಸಿದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಭಾರತೀಯ ವಿಜ್ಞಾನ ಸಂಸ್ಥೆಯ ಜೆಜೆ ಟಾಟಾ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಯೋಜನೆ ಪರವಾಗಿ ತೀರ್ಪು ನೀಡಿರುವುದರಿಂದ ಇದೀಗ ಕೇಂದ್ರದ ಅನುಮತಿಗೆ ಕಾಯುತ್ತಿರುವುದಾಗಿ ಹೇಳಿದರು.
ಬೆಂಗಳೂರು ನಗರದಲ್ಲಿ 1.50 ಕೋಟಿ ಜನಸಂಖ್ಯೆ ಇದೆ. ಜಾಗತಿಕ ಹೂಡಿಕೆದಾರರು ಬೆಂಗಳೂರಿನತ್ತ ಮುಖ ಮಾಡುತ್ತಿದ್ದಾರೆ. ಎಲ್ಲರಿಗೂ ನೀರು ಪೂರೈಸುವ ಜವಾಬ್ದಾರಿ ನಮ್ಮ ಮೇಲಿದೆ. ಮೇಕೆದಾಟು ಯೋಜನೆಯಿಂದ ಬೆಂಗಳೂರು ಸೇರಿದಂತೆ ಈ ಭಾಗದ ಪ್ರದೇಶಗಳಿಗೆ ಕುಡಿಯುವ ನೀರು ಹಾಗೂ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ ಎಂದು ವಿವರಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ಮಾತನಾಡಿದ ಅವರು, 2013ರ ಭೂಸ್ವಾಧೀನ ಕಾಯ್ದೆ ಅನುಸಾರ ಭೂಮಿ ಕಳೆದುಕೊಳ್ಳುವ ರೈತರಿಗೆ ನ್ಯಾಯಸಮ್ಮತ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದರು. 2025ರ ಡಿಸೆಂಬರ್ ವೇಳೆಗೆ 1.72 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುವ ಗುರಿ ಹೊಂದಲಾಗಿದೆ ಎಂದರು.
ಅಣೆಕಟ್ಟು ಸುರಕ್ಷತಾ ಮಾರ್ಗಸೂಚಿಯಲ್ಲಿ ಅಣೆಕಟ್ಟಿನ ಸುತ್ತ 500 ಮೀಟರ್ ವರೆಗೆ ವಿಧಿಸಿರುವ ನಿರ್ಬಂಧವನ್ನು ಸಡಿಲಗೊಳಿಸಿ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ವಿಶ್ವ ಬ್ಯಾಂಕ್ ನೆರವಿನ ಅಣೆಕಟ್ಟು ಪುನರ್ವಸತಿ ಮತ್ತು ಸುಧಾರಣಾ ಯೋಜನೆಯಡಿ ರಾಜ್ಯದ 58 ಅಣೆಕಟ್ಟುಗಳ ದುರಸ್ತಿ ಕಾರ್ಯಗಳಿಗೆ 1500 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದು ಹೇಳಿದರು.



