ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಪುರಸಭೆ ಸದಸ್ಯರ ಅವಧಿ ಇದೇ ನವೆಂಬರ್ನಲ್ಲಿ ಮುಕ್ತಾಯಗೊಳ್ಳಲಿದ್ದು, ಅಧಿಕಾರಾವಧಿ ಪೂರ್ಣಗೊಳ್ಳದ ನೆಪದಲ್ಲಿ ಕೆಲವು ಸದಸ್ಯರು ಚುನಾವಣೆಗಳನ್ನು ತಡೆಗಟ್ಟುವಂತೆ ನ್ಯಾಯಾಲಯದ ಮೊರೆ ಹೋಗಿರುವುದು ಯೋಗ್ಯವಾದ ಕ್ರಮವಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಅಧ್ಯಕ್ಷ ಮಹೇಶ ಕಲಘಟಗಿ ಹಾಗೂ ಯುವ ಮುಖಂಡ ನಾಗರಾಜ ಚಿಂಚಲಿ ಆರೋಪಿಸಿದ್ದಾರೆ.
ಗುರುವಾರ ಪಟ್ಟಣದ ಪುರಸಭೆ ಮುಖ್ಯಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
“ಕೆಲವು ಸದಸ್ಯರು ಅಧ್ಯಕ್ಷ–ಉಪಾಧ್ಯಕ್ಷರ 30 ತಿಂಗಳ ಅವಧಿ ಪೂರ್ಣವಾಗಿಲ್ಲವೆಂಬ ನೆಪದಲ್ಲಿ ಧಾರವಾಡದ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದು ಸಮಂಜಸವಾದ ನಿರ್ಧಾರವಲ್ಲ; ಸದಸ್ಯರು ತಮ್ಮ ನಡೆಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು,” ಎಂದು ಕಲಘಟಗಿ ಹೇಳಿದರು.
ಅವರು ಮುಂದುವರಿಸಿ, “ಇದಿನವರೆಗೆ ಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಆದ್ಯತೆ ನೀಡಲಾಗಿಲ್ಲ. 5–6 ವರ್ಷಗಳಿಂದ ನೀರಿನ ಸಮಸ್ಯೆ ಬಗೆಹರಿಸಲು ಸರಿಯಾದ ಕ್ರಮವಿಲ್ಲ. ಜನರು ಈಗಿನ ಆಡಳಿತದಿಂದ ಬೇಸತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿ ಜನಸೇವೆ ಮಾಡಲು ಬಯಸುವುದು ಒಳ್ಳೆಯದು, ಆದರೆ ಕೋರ್ಟ್ಗೆ ಹೋಗುವ ನಿರ್ಧಾರ ನಾಚಿಕೆಗೇಡುತನವಾಗಿದೆ,” ಎಂದರು.
ಇದೇ ವೇಳೆ, “ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಮತ್ತು ಮುಖ್ಯಾಧಿಕಾರಿಗಳು ಪ್ರತಿವಾದಿಗಳಾಗಿದ್ದಾರೆ. ಜನರ ಬೇಡಿಕೆಯನ್ನು ಪರಿಗಣಿಸಿ, ಸದಸ್ಯರು ಪಡೆದಿರುವ ಎಲ್ಲ ಸೌಲಭ್ಯಗಳ ವಿವರ ಸಲ್ಲಿಸಿ, ಈ ಕೇಸನ್ನು ತಿರಸ್ಕರಿಸಲು ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದರು.
ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಂಜುನಾಥ ಗಾಂಜಿ, ಮಲ್ಲನಗೌಡ ಪಾಟೀಲ, ಶ್ರೇಯಾಂಕ ಹಿರೇಮಠ, ವೀರೇಶ ಹಗ್ಗರದ, ತೇಜನಗೌಡ ಉದ್ದನಗೌಡ್ರ, ಚಂದ್ರಕಾಂತ ಮುಳಗುಂದ, ಅಭಿ ಬೂದಿಹಾಳ, ಮಂಜು ಕಮತದ, ಪ್ರಕಾಶ ಉದ್ದನಗೌಡ್ರ, ಮಂಜು ಪಾಣಿಗಟ್ಟಿ, ಹಾಲಪ್ಪ ಸಂಕದಾಳ, ದ್ಯಾಮನಗೌಡ ರಾಯರ್, ರವಿ ಉದ್ದನಗೌಡ್ರ, ತೇಜಸ್ವಿನಿ ಸೇರಿದಂತೆ ಅನೇಕರಿದ್ದರು.
ಪುರಸಭೆ ಸದಸ್ಯರ ಅವಧಿ ನವೆಂಬರ್ 4, 2020 ರಂದು ಪ್ರಾರಂಭಗೊಂಡಿದ್ದು, ಈವರೆಗೆ ಸರಕಾರದಿಂದ ನೀಡುವ ಗೌರವಧನವನ್ನು ಸಂಪೂರ್ಣವಾಗಿ ಪಡೆದಿದ್ದಾರೆ. ಮೀಸಲಾತಿ ಘೋಷಣೆಯಾಗದ ಅವಧಿಯಲ್ಲಿಯೂ ಸಹ ಪುರಸಭೆ ಸದಸ್ಯರೆಂದು ಎಲ್ಲ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. “ಆದರೂ ಸಹ ಅಧಿಕಾರಾವಧಿ ವಿಸ್ತರಣೆಗೆ ಕೋರ್ಟ್ಗೆ ಅರ್ಜಿ ಸಲ್ಲಿಸಿರುವುದು ಖಂಡನೀಯ,” ಎಂದು ಮಹೇಶ ಕಲಘಟಗಿ ಮತ್ತು ನಾಗರಾಜ ಚಿಂಚಲಿ ಟೀಕಿಸಿದರು.



