ವಿಜಯಸಾಕ್ಷಿ ಸುದ್ದಿ, ರೋಣ: ಪಟ್ಟಣದ ಎಲ್ಲ 23 ವಾರ್ಡ್ಗಳ ರಸ್ತೆ ಸುಧಾರಣೆಗೆ 4 ಕೋಟಿ ರೂ ಮತ್ತು ಜಕ್ಕಲಿ ರಸ್ತೆಯಲ್ಲಿನ ರಾಜಕಾಲುವೆ ನಿರ್ಮಾಣಕ್ಕಾಗಿ 1 ಕೋಟಿ ರೂ ಅನುದಾನವನ್ನು ಒದಗಿಸಲಾಗಿದ್ದು, ಸರ್ವ ಸದಸ್ಯರು ವಾರ್ಡ್ಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷರು, ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.
ಅವರು ಶನಿವಾರ ಅಬ್ಬಿಗೇರಿ ರಸ್ತೆಯಲ್ಲಿರುವ ಪುರಸಭೆಯ ಕಸ ವಿಲೇವಾರಿ ಘಟಕದ ಬಳಿ 3 ಕೋಟಿ 12 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಮಲ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಜೆಜೆಎಂ ಕಾಮಗಾರಿಯಿಂದ ಪಟ್ಟಣದ ಅನೇಕ ವಾರ್ಡ್ಗಳಲ್ಲಿನ ರಸ್ತೆಗಳು ಕಿತ್ತುಹೋಗಿದ್ದು, ಅವುಗಳನ್ನು ಸರಿಪಡಿಸಲು 4 ಕೋಟಿ ರೂ ಅನುದಾನವನ್ನು ಒದಗಿಸಲಾಗಿದೆ. ಅಲ್ಲದೆ, ಪಟ್ಟಣದ ಸೌಂದರ್ಯವನ್ನು ಹೆಚ್ಚಿಸಲು ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪಟ್ಟಣದ ಅಬಿವೃದ್ಧಿಯ ದೃಷ್ಟಿಯಿಂದ ಸಾರ್ವಜನಿಕರೂ ಸಹ ಕೈಜೋಡಿಸಬೇಕು. ಮುಖ್ಯವಾಗಿ ವಾರ್ಡ್ಗಳ ಸದಸ್ಯರು ವಾರ್ಡ್ಗಳಲ್ಲಿನ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕು ಎಂದರು.
ಪಟ್ಟಣದ ಜನತೆ ಮಲ ಸಂಸ್ಕರಣಾ ವಾಹನಗಳ ಮೂಲಕ ಹಳ್ಳ-ಕೊಳ್ಳಗಳಲ್ಲಿ ಹರಿದು ಬಿಡುತ್ತಿದ್ದರು. ಇನ್ನುಂದೆ ಹಾಗೆ ಆಗದು. ತ್ಯಾಜ್ಯವನ್ನು ವಾಹನಗಳ ಮೂಲಕ ಮಲ ಸಂಸ್ಕರಣಾ ಘಟಕಕ್ಕೆ ಸಾಗಿಸಬೇಕು. ಇದರಿಂದ ನಾಗರಿಕ ಸಮುದಾಯ ಆರೋಗ್ಯದ ದೃಷ್ಟಿಯಿಂದಲೂ ಅನುಕೂಲಕರವಾಗಲಿದೆ ಎಂದ ಅವರು, ಪಟ್ಟಣದಲ್ಲಿನ ಸ್ವಚ್ಛತೆಗೆ ವಿಷೇಷ ಆದ್ಯತೆಯನ್ನು ಕಲ್ಪಿಸಲಾಗಿದ್ದು, ಪುರಸಭೆಯ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ಸಹ ಜನಪ್ರತಿನಿಧಿಗಳಿಗೆ ಸಹಕಾರ ನಿಡಬೇಕು ಎಂದರು.
ಪುರಸಭೆ ಅಧ್ಯಕ್ಷೆ ಬಸ್ಸಮ್ಮ ಕೊಪ್ಪದ, ಉಪಾಧ್ಯಕ್ಷ ಹನ್ಮಂತಪ್ಪ ತಳ್ಳಿಕೇರಿ, ವಿ.ಬಿ. ಸೋಮನಕಟ್ಟಿಮಠ, ಸದಸ್ಯರಾದ ಬಾವಾಸಾಬ ಬೆಟಗೇರಿ, ದಾವಲಸಾಬ ಬಾಡಿನ, ದುರಗಪ್ಪ ಹಿರೇಮನಿ, ಮಲ್ಲಯ್ಯಜ್ಜ ಮಹಾಪುರುಷಮಠ, ಸಂಗಪ್ಪ ಜಿಡ್ಡಿಬಾಗಿಲ, ಮುಖ್ಯಾಧಿಕಾರಿ ರಮೇಶ ಹೊಸಮನಿ ಸೇರಿದಂತೆ ಪುರಸಭೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಹುಡುಗಾಟ ಸಲ್ಲದು
“ಪಟ್ಟಣದ ಅಭಿವೃದ್ಧಿ ಮತ್ತು ಸ್ವಚ್ಛತೆಯ ವಿಚಾರದಲ್ಲಿ ಹುಡುಗಾಟ ಸರಿಯಲ್ಲ. ಮುಖ್ಯಾಧಿಕಾರಿಗಳು ಇದನ್ನು ಗಮನಿಸಬೇಕು. ಎಲ್ಲದಕ್ಕೂ ಸದಸ್ಯರೇ ನಿಲ್ಲಲು ಸಾಧ್ಯವಿಲ್ಲ. ಪಟ್ಟಣದ ಅಭಿವೃದ್ಧಿಯ ದೃಷ್ಟಿಯಿಂದ ನಾನು ಕೆಲ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ಇಲ್ಲದಿದ್ದರೆ ಪಟ್ಟಣದ ಸೌಂದರ್ಯವನ್ನು ವೃದ್ಧಿಸುವುದು ಸವಾಲಾಗಿ ಪರಿಣಮಿಸುತ್ತದೆ. ನಾನು ತೆಗೆದುಕೊಂಡಿರುವ ಕಠಿಣ ನಿರ್ಧಾರಗಳಿಗೆ ಮುಖ್ಯಾಧಿಕಾರಿಗಳು ಸೇರಿದಂತೆ ಪುರಸಭೆಯ ಎಲ್ಲ ಸದಸ್ಯರು ಕೈಜೋಡಿಸಬೇಕು. ಇದರಿಂದ ಪಟ್ಟಣದ ಅಭಿವೃದ್ಧಿ ಮತ್ತು ಸ್ವಚ್ಛತೆ ತಾನಾಗಿಯೇ ಆಗುತ್ತದೆ”
– ಜಿ.ಎಸ್. ಪಾಟೀಲ.
ಶಾಸಕರು, ರೋಣ.